ವಿಧಾನಸೌಧ
ಬೆಂಗಳೂರು: ರಾಜ್ಯದಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ನಗರ ಪ್ರದೇಶಗಳಲ್ಲಿನ ಅತೀ ಹಿಂದುಳಿದ ಕಾಲೊನಿಗಳಲ್ಲಿ ₹ 398 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಂಡು ‘ಮಾದರಿ ಕಾಲೊನಿ’ಗಳಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಒಟ್ಟು 22 ವಿಧಾನಸಭಾ ಕ್ಷೇತ್ರಗಳಲ್ಲಿ 40 ಕಾಮಗಾರಿಗಳನ್ನು ಕೆಆರ್‌ಐಡಿಎಲ್ ಮೂಲಕ ಅನುಷ್ಠಾನಗೊಳಿಸುವ ಪ್ರಸ್ತಾವಕ್ಕೂ ಅನುಮೋದನೆ ನೀಡಲಾಗಿದೆ. 2024–25ನೇ ಸಾಲಿನಲ್ಲಿ ಈ ಕಾಮಗಾರಿಗಳಿಗೆ ₹ 160 ಕೋಟಿ ಬಿಡುಗಡೆ ಮಾಡಲಾಗಿದೆ.
ರಾಗಿ ಹೆಲ್ತ್ ಮಿಕ್ಸ್ ಪುಡಿ ಮಿಶ್ರಣ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ಬಿಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ವಾರದಲ್ಲಿ ಐದು ದಿನ ನೀಡಲು ಅಂದಾಜು ₹ 27.02 ಕೋಟಿಯ ಪ್ರಸ್ತಾವಕ್ಕೆ ಸಭೆ ಅನುಮೋದನೆ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. ಯೋಜನೆಯ ಶೇ 25ರಷ್ಟನ್ನು (ಸಾಗಣೆ ವೆಚ್ಚ ₹ 6.49 ಕೋಟಿ ಸೇರಿ ₹ 27.02 ಕೋಟಿ) ರಾಜ್ಯ ಸರ್ಕಾರ ಭರಿಸಲಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಪ್ರತಿ ತಿಂಗಳು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಪಾವತಿಸಬೇಕಾಗಿರುವ ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕದ ವಂತಿಕೆ ಹಂಚಿಕೆಯನ್ನು ಬದಲಿಸಲು ಸಭೆ ನಿರ್ಧರಿಸಿದೆ. ಒಟ್ಟು 60 ಪೈಸೆಯಲ್ಲಿ ಆವರ್ತ ನಿಧಿಗೆ 10 ಪೈಸೆ, ಕೃಷಿ ಮಾರಾಟ ಮಂಡಳಿಗೆ ವಂತಿಗೆ 5 ಪೈಸೆ, ಪ್ರಾಂಗಣದಲ್ಲಿ ಮೂಲಸೌಕರ್ಯ,ನಿರ್ವಹಣೆ, ಸಮಿತಿ ಆಡಳಿತ ವೆಚ್ಚ 41 ಪೈಸೆ, ರೈತರಿಗೆ ಬೇಕಾದ ಆನ್‌ಲೈನ್ ಸೇವೆ ಒದಗಿಸುವ ರಾಷ್ಟ್ರೀಯ ಇ ಮಾರ್ಕೆಟ್ ಸವೀರ್‍ಸಸ್ ಪ್ರೈ.ಲಿ (ರೆಮ್ಸ್) ಸಂಸ್ಥೆಗೆ ವಹಿವಾಟು ವೆಚ್ಚ 1 ಪೈಸೆ, ಮಾರುಕಟ್ಟೆ ಅಭಿವೃದ್ಧಿ ನೆರವು ನಿಧಿಗೆ (ಮಾರುಕಟ್ಟೆ ಶುಲ್ಕ ಮತ್ತು ಪರವಾನಗಿ) 3 ಪೈಸೆಯಂತೆ ಹಂಚಿಕೆ ಮಾಡುವ ಪ್ರಸ್ತಾವಕ್ಕೆ ಸಭೆ ಅನುಮೋದನೆ ನೀಡಿದೆ.
ಸಂಪುಟ ಸಭೆಯ ನಿರ್ಣಯಗಳು:
* ಪ್ರಸಕ್ತ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ‘ಶುಚಿ’ ಯೋಜನೆಯಡಿ ₹ 71.93 ಕೋಟಿಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಖರೀದಿಸಿ, ವಿತರಣೆ
* ಎಲ್ಲ ಜಿಲ್ಲೆಗಳಲ್ಲಿ ಉಚಿತ ಸಮಗ್ರ ನೇತ್ರ ತಪಾಸಣೆ, ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು ಕನ್ನಡಕಗಳನ್ನು ವಿತರಿಸುವ ‘ಆಶಾ ಕಿರಣ’ ಯೋಜನೆ ₹ 52.85 ಕೋಟಿ ವೆಚ್ಚದಲ್ಲಿ ಅನುಷ್ಠಾನ
* ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ರಾಯಚಂದ್ರ ಗ್ರಾಮದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಗೃಹ ಮಂಡಳಿಯಿಂದ ₹ 65 ಕೋಟಿ ಮೊತ್ತದಲ್ಲಿ 25 ಎಕರೆ ಜಮೀನು ಖರೀದಿ ಮತ್ತು ಆರೋಗ್ಯ ವಿಶ್ವವಿದ್ಯಾಲಯದಿಂದ ಗೃಹ ಮಂಡಳಿಗೆ ₹ 39.79 ಕೋಟಿ ಬಿಡುಗಡೆ
* ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆಯ ಕಾಮಗಾರಿಗಳಿಗೆ ₹ 77.35 ಕೋಟಿ ಮೊತ್ತದಲ್ಲಿ 221 ಎಕರೆ 1.12 ಗುಂಟೆ ಜಮೀನು ಖರೀದಿ
* ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ಎತ್ತಿ ತುಂಬಿಸುವ ಯೋಜನೆಗೆ ₹ 179.50 ಕೋಟಿ ವೆಚ್ಚ
* ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯ ಮೂಲಕ ಬ್ಯಾಡಗಿ ಮತ್ತು ಹಾನಗಲ್ ತಾಲ್ಲೂಕಿನ 137 ಕೆರೆ ತುಂಬಿಸುವ ಯೋಜನೆಗೆ ₹ 115.60 ಕೋಟಿ ವೆಚ್ಚ
* ಮುಜರಾಯಿ ಇಲಾಖೆಯಿಂದ ಬೆಂಗಳೂರು ನಗರ ಜಿಲ್ಲೆ ಕೆ.ಆರ್. ವೃತ್ತದಲ್ಲಿರುವ ಶ್ರೀ ರಾಮಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ 9191 ಚದರ ಮೀಟರ್ ಭೂಮಿಯಲ್ಲಿ ₹ 27.70 ಕೋಟಿಯಲ್ಲಿ ‘ಧಾರ್ಮಿಕ ಸೌಧ’ ನಿರ್ಮಾಣ
* ಸಿಂದಗಿ, ಸವದತ್ತಿ ಯಲ್ಲಮ್ಮ ಮತ್ತು ಹುಮನಾಬಾದ್ ಪುರಸಭೆ ನಗರಸಭೆಗಳಾಗಿ ಘೋಷಣೆ
* ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ₹ 63.34 ಕೋಟಿ ವೆಚ್ಚದಲ್ಲಿ ಹಾಗೂ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
* 14 ಜಿಲ್ಲೆಗಳಲ್ಲಿ ₹ 15.45 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ 20 ವಿದ್ಯಾರ್ಥಿ ನಿಲಯ ನಿರ್ಮಾಣ
* ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯ ಅಡಿಯಲ್ಲಿ ಇ–ಸಮನ್ಸ್‌ಗಳನ್ನು ಜಾರಿ ಮಾಡಲು ಅವಕಾಶ ಮಾಡಿಕೊಡುವ ‘ಕರ್ನಾಟಕ ವಿದ್ಯಯನ್ಮಾನ ಪ್ರಕ್ರಿಯಾ (ಸೇವಾ ಮತ್ತು ಅನುಷ್ಠಾನ) ನಿಯಮಗಳು–2025’ ಅಧಿಸೂಚನೆ
* ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳನ್ನು ಇ–ಸಾಕ್ಷ್ಯ ಪೋಟರ್ಲ್‌ಗೆ ಅಪ್‌ಲೋಡ್ ಮಾಡಲು ಮತ್ತು ಅದನ್ನು ವೀಕ್ಷಿಸಲು ಅವಕಾಶ ಮಾಡಿಕೊಡುವ ‘ಕರ್ನಾಟಕ ಇ–ಸಾಕ್ಷ್ಯ ನಿರ್ವಹಣಾ ನಿಯಮಗಳು–2025’ರ ಸಂಬಮದ ಅಧಿಸೂಚನೆ
ಕೆಜಿಐಡಿ ಲಾಭಾಂಶ ಘೋಷಣೆ
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯ ವಿಮಾದಾರರಿಗೆ 2020–22ರ ದ್ವೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿರುವ ಎಲ್ಲ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗೆ ಪ್ರತಿವರ್ಷಕ್ಕೆ ₹ 80 ರಂತೆ ಲಾಭಾಂಶ ವಿತರಿಸಲು ಸರ್ಕಾರ ನಿರ್ಧರಿಸಿದೆ.
ಅವಧಿ ಪೂರ್ಣಗೊಂಡ, ವಿಮಾದಾರರ ಮರಣ ಪ್ರಕರಣ ಹಾಗೂ ವಿಮಾತ್ಯಾಗ ಮೌಲ್ಯಗಳಿಂದ 2022ರ ಏಪ್ರಿಲ್ 1ರಿಂದ 2024 ಮಾರ್ಚ್ 31ರವರೆಗಿನ ಅವಧಿಯಲ್ಲಿ ಪ್ರತಿ ಸಾವಿರ ರೂಪಾಯಿಗೆ ಪ್ರತಿವರ್ಷಕ್ಕೆ ₹80 ನಂತೆ ಮಧ್ಯಂತರ ಲಾಭಾಂಶ ಘೋಷಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
62 ಅಪರಾಧ ಪ್ರಕರಣಗಳು ವಾಪಸ್
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿರುವ 62 ಅಪರಾಧ ಪ್ರಕರಣಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.
ರಸ್ತೆ ತಡೆ, ಪ್ರತಿಭಟನೆ, ಸರ್ಕಾರಿ ನೌಕರ–ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದಂತಹ ಪ್ರಕರಣಗಳು ಇದರಲ್ಲಿ ಸೇರಿವೆ. ರೈತ ಸಂಘ, ಸರ್ಕಾರಿ ನೌಕರರ ಹೋರಾಟ ಸಮಿತಿಗಳು, ಖಾಸಗಿ ವ್ಯಕ್ತಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ರದ್ದತಿ ಕೋರಿ ವೈಯಕ್ತಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಜತೆಗೆ ಹಿಂದಿನ ಗೃಹ ಸಚಿವರು ನೀಡಿದ್ದ ಟಿಪ್ಪಣಿ, ಹಾಗೂ ಜನಪ್ರತಿನಿಧಿಗಳು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ ಎಂದು ಸಂಪುಟ ಸಭೆಯು ತಿಳಿಸಿದೆ.
ಹಾಲಿ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಬಾರದು ಎಂಬ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ತೀರ್ಪು, ನಿರ್ದೇಶನಗಳನ್ನು ಪಾಲಿಸಲಾಗಿದೆ ಎಂದೂ ಸಭೆಯು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.