
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ನಗರದಲ್ಲಿ ಗುರುವಾರ ಆಯೋಜಿಸಿದ್ದ ಅಲ್ಪಸಂಖ್ಯಾತರ ಹಕ್ಕುಗಳ ದಿನ ಕಾರ್ಯಕ್ರಮಕ್ಕೆ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ ಚಾಲನೆ ನೀಡಿದರು. ರಿಜ್ವಾನ್ ಅರ್ಷದ್, ನಿಸಾರ್ ಅಹಮ್ಮದ್ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲ ಎಂಬ ಅಭದ್ರತೆಯ ಭಾವನೆ ಬಾರದಂತೆ ನೋಡಿಕೊಳ್ಳಬೇಕು. ಸಾಮರಸ್ಯ, ಸೌಹಾರ್ದದ ಭಾರತವನ್ನು ಉಳಿಸಿಕೊಂಡು ಸಂವಿಧಾನ ನೀಡಿರುವ ಹಕ್ಕುಗಳಡಿ ಸೌಲಭ್ಯಗಳನ್ನು ನೀಡಬೇಕು’ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಗುರುವಾರ ನಗರದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಹಕ್ಕುಗಳ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ‘ಭಾರತ ಹಲವು ಧರ್ಮ, ಸಂಸ್ಕೃತಿಗಳ ಸಂಗಮ. ಇಷ್ಟು ವೈವಿಧ್ಯತೆಯನ್ನು ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಸಂವಿಧಾನ ಒತ್ತಿ ಹೇಳಿರುವಂತೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು’ ಎಂದು ತಿಳಿಸಿದರು.
‘ದೇಶದಲ್ಲಿ ಒಂದೇ ಧರ್ಮ ಇರಬೇಕು ಎನ್ನುವ ಅಭಿಪ್ರಾಯ ಮೂಡಿಸುವುದು. ಹುನ್ನಾರ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಪ್ರತಿಯೊಬ್ಬರೂ ತಮ್ಮ ಧರ್ಮ, ಭಾಷೆ, ಸಂಸ್ಕೃತಿ ಉಳಿಸಿಕೊಂಡು ಹೋಗುವಂತಹ ಹಕ್ಕುಗಳನ್ನು ನೀಡಲಾಗಿದೆ. ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆ ತೆರೆಯುವುದು ಸೇರಿದಂತೆ ಸಂವಿಧಾನದಡಿ ಒದಗಿಸಿರುವ ಸವಲತ್ತುಗಳನ್ನು ತಲುಪಿಸುವ ಕೆಲಸ ಆಗಬೇಕು. ಆಯೋಗಗಳು ಹಕ್ಕುಗಳ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ‘ಸಂವಿಧಾನದಲ್ಲಿಯೇ ಅಲ್ಪಸಂಖ್ಯಾತರಿಗೆ ಹಕ್ಕುಗಳನ್ನು ನೀಡಲಾಗಿದೆ. ಅದನ್ನು ಪಡೆಯಲು ಸಂಕಷ್ಟ ಪಡುವ ಸ್ಥಿತಿ ಈಗಲೂ ಇದೆ. ಹಕ್ಕು ಕೇಳಿದರೆ ಜಿಹಾದಿ ಎನ್ನುವ, ಅಲ್ಪಸಂಖ್ಯಾತರ ಪರವಾಗಿ ದನಿ ಎತ್ತುವವರನ್ನು ನಗರ ನಕ್ಸಲರು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಅಲ್ಪಸಂಖ್ಯಾತರ ಅಭಿವೃದ್ದಿಗೆ ₹5 ಸಾವಿರ ಕೋಟಿಯನ್ನು ಬಜೆಟ್‌ನಲ್ಲಿ ಒದಗಿಸಿದರೆ ತುಷ್ಟೀಕರಣ ಎಂದು ವಿರೋಧ ಪಕ್ಷಗಳು ಟೀಕಿಸುತ್ತವೆ. ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಾವು ತೆರಿಗೆ ಕಟ್ಟುವುದಿಲ್ಲವೇ, ಬಜೆಟ್‌ನಲ್ಲಿ ನಮಗೆ ಆದ್ಯತೆ ಕೊಡುವುದಿಲ್ಲ ಎಂದಾದರೆ ತೆರಿಗೆಯಿಂದ ನಮಗೆ ಏಕೆ ವಿನಾಯಿತಿ ಕೊಡಬಾರದು’ ಎಂದು ಪ್ರಶ್ನಿಸಿದರು.
ಸಚಿವ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ವರ್ಚ್ಯುಯಲ್ ಆಗಿ ಮಾತನಾಡಿದರು. ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಜಯಕುಮಾರ್ ಸಿಂಗ್, ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾಡೊ ಹಾಜರಿದ್ದರು.
ಅಲ್ಪಸಂಖ್ಯಾತ ಸಮುದಾಯದ ಹಲವು ಸಾಧಕರನ್ನು ಈ ವೇಳೆ ಸನ್ಮಾನಿಸಲಾಯಿತು. ಭಾರತ ಹಾಕಿ ತಂಡದ ಮಾಜಿ ನಾಯಕ ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಬೀದರ್‌ನ ಸಾಮಾಜಿಕ ಕಾರ್ಯಕರ್ತ ಸರ್ದಾರ್ ಮನ್ಮಿತ್ ಸಿಂಗ್ ಗ್ರಂಥಿ ಅನಾಥರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉಡುಪಿಯ ಆಯೆಷಾಬಾನು ಹಿಂದೂಸ್ತಾನಿ ಗಾಯಕ ಹುಸನೇಸಾಬ್ ನದಾಫ್ ಪೈಲಟ್ ಹುದಾ ಮಸ್ರೂರ್ ಎಂಜಿನಿಯರ್ ಪದ್ಮಶ್ರೀ ಎನ್ ಬೈಲಕುಪ್ಪೆಯ ಖೇನ್ ರಿಂಪೋಚೆ ಗಶೆ ನವಾಂಗ್ ಸಂಗಯ್ ಶೆರಿಯಾರ್ ಡಿ. ವಕೀಲ್ ಅವರು ಸನ್ಮಾನ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.