ADVERTISEMENT

ಬೆಳಗಾವಿ: ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2021, 6:12 IST
Last Updated 18 ಡಿಸೆಂಬರ್ 2021, 6:12 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಳಗಾವಿ: ಬೆಳಗಾವಿಯಲ್ಲಿ ಕಿಡಿಗೇಡಿಗಳ ಕಲ್ಲು ತೂರಾಟ ಹಾಗೂ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಹಾನಿ ಮಾಡಿರುವ ಘಟನೆಯನ್ನು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಂಡಿಸಿದ್ದು, ತಪ್ಪಿತ್ತಸ್ಥರನ್ನು ತಕ್ಷಣ ಬಂಧಿಸಿ ಜೈಲಿಗಟ್ಟುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿರುವ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ. ಕರ್ನಾಟಕ ಮುಖ್ಯಮಂತ್ರಿ ಅವರು ಈ ಗೂಂಡಾಗಳನ್ನು ತಕ್ಷಣ ಬಂಧಿಸಿ ಜೈಲಿಗಟ್ಟುವಂತೆ ಪೊಲೀಸರಿಗೆ ಆದೇಶ ನೀಡಬೇಕು' ಎಂದು ಒತ್ತಾಯಿಸಿದರು.

'ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಇದಕ್ಕೆಲ್ಲ 'ಕ್ರಿಯೆಗೆ ಪ್ರತಿಕ್ರಿಯೆ' ಎಂಬ ಮೊಂಡುವಾದ ಮಂಡಿಸಬೇಡಿ. ಕಾನೂನಿನ ಕ್ರಮ ಇಂತಹ ಪುಂಡರಿಗೆ ಕಠಿಣ ಸಂದೇಶವಾಗಲಿ' ಎಂದು ಹೇಳಿದ್ದಾರೆ.

ಇದೇ ವೇಳೆ ಕನ್ನಡ ಬಂಧುಗಳು ಆವೇಶಕ್ಕೆ ಒಳಗಾಗದೆ, ಸಂಯಮದಿಂದ ಶಾಂತಿ- ಸೌಹಾರ್ದತೆ ಕಾಪಾಡಿಕೊಂಡು ಬರಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಾಡದ್ರೋಹಿ ಕೃತ್ಯಗಳನ್ನು ಎಂದಿಗೂ ಸಹಿಸುವುದಿಲ್ಲ:ಕಾಂಗ್ರೆಸ್
ಏತನ್ಮಧ್ಯೆ ಅನಗೊಳದಲ್ಲಿ ಸ್ವಾತಂತ್ರ್ಯ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಭಗ್ನ ಸೇರಿದಂತೆ ಬೆಳಗಾವಿಯಲ್ಲಿ ಸಮಾಜದ್ರೋಹಿಗಳ ಪುಂಡಾಟಿಕೆಯನ್ನು ಕರ್ನಾಟಕ ಕಾಂಗ್ರೆಸ್ ಖಂಡಿಸಿದೆ. ಸಮಾಜಘಾತುಕರ ಕನ್ನಡದ್ರೋಹಿ, ನಾಡದ್ರೋಹಿ ಕೃತ್ಯಗಳನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.