
ಸಂಗ್ರಹ ಚಿತ್ರ
ಬೆಂಗಳೂರು: ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಮತ್ತು ಅವರ ಕಾರ್ಯಕ್ಷಮತೆ ಆಧರಿಸಿ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡುವ ಕುರಿತು ಸರ್ಕಾರಕ್ಕೆ ಸಲಹೆ ನೀಡಲು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಚಿಂತನೆ ನಡೆಸಿದ್ದಾರೆ.
ಈ ಮೂಲಕ ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಮತ್ತು ಕಲಾಪಗಳಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಸಾಧ್ಯ ಎಂಬುದು ಅವರ ಆಲೋಚನೆ. ಶಾಸಕರು, ಕಲಾಪ ಸಲಹಾ ಸಮಿತಿ ಸದಸ್ಯರು, ಸಚಿವರು, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯ ವರಿಗೂ ಅನ್ವಯವಾಗುವಂತೆ ಹಾಜರಾತಿ ಆಧರಿಸಿ ಅನುದಾನ ನೀಡುವ ವ್ಯವಸ್ಥೆ ಜಾರಿ ತರಲು ಸಲಹೆ ನೀಡಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕಲಾಪದಲ್ಲಿ ಶಾಸಕರ ಹಾಜರಾತಿ ಹೆಚ್ಚಬೇಕು ಮತ್ತು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಕಾರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಮೊದಲ ಬಾರಿ ಆಯ್ಕೆಯಾದವರು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ಹಿರಿಯ ಸಂಸದೀಯ ಪಟುಗಳ ಚರ್ಚೆಯನ್ನು ಆಲಿಸಬೇಕು ಎಂಬ ಕಾರಣಕ್ಕೆ ಪ್ರತಿ ಅಧಿವೇಶನದ ವೇಳೆಯೂ ಖಾದರ್ ಆಗ್ರಹಪಡಿಸುತ್ತಲೇ ಬಂದಿದ್ದಾರೆ.
‘ಕಲಾಪದಲ್ಲಿ ಶಾಸಕರ ಹಾಜರಾತಿ ಆಧರಿಸಿ ಅನುದಾನ ಹಂಚಿಕೆ ಮಾಡುವ ಪರಿಲ್ಪನೆ ಒಳ್ಳೆಯದೇ. ಹೆಚ್ಚಿನ ಚರ್ಚೆಗಾಗಿ ಅಧಿವೇಶನದ ದಿನಗಳನ್ನೂ ಹೆಚ್ಚಿಸಬೇಕು. ವರ್ಷಕ್ಕೆ 60 ದಿನ ಅಧಿವೇಶನ ನಡೆಯಬೇಕು ಎಂಬ ನಿಯಮವಿದೆ. ಹಿಂದೆ ಹೆಚ್ಚು ದಿನಗಳ ಕಾಲ ಕಲಾಪ ನಡೆಯುತ್ತಿತ್ತು. ಈಗ ಹೆಚ್ಚು ದಿನ ನಡೆಯುತ್ತಿಲ್ಲ. ಬಜೆಟ್ ಅಧಿವೇಶನ ಹೆಚ್ಚು ದಿನ ನಡೆದರೆ ಮುಕ್ತ ಚರ್ಚೆಗೆ ಅವಕಾಶ ಸಿಗುತ್ತದೆ’ ಎನ್ನುತ್ತಾರೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ.
‘ಪ್ರತಿಯೊಬ್ಬ ಶಾಸಕರಿಗೂ ತಮ್ಮ ಕ್ಷೇತ್ರದ ಬಗ್ಗೆ, ಅಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂಬ ತುಡಿತ ಇರುತ್ತದೆ. ಆದರೆ ಅವಕಾಶ ಸೀಮಿತ. ಸದನದಲ್ಲಿ ಉತ್ತರಿಸುವ ಪ್ರಶ್ನೆ ಬಂದರೆ ಅಥವಾ ಗಮನ ಸೆಳೆಯುವ ಸೂಚನೆಯಲ್ಲಿ ನಮ್ಮ ಪ್ರಶ್ನೆ ಬಂದರೆ ಮಾತ್ರ ಮಾತನಾಡಬಹುದು. ಇಲ್ಲದಿದ್ದರೆ ಸಾಧ್ಯವಿಲ್ಲ. ಬೆಳಿಗ್ಗೆಯಿಂದ ತಡ ರಾತ್ರಿವರೆಗೆ ಕಲಾಪ ನಡೆಸುವುದಕ್ಕಿಂತ ಹೆಚ್ಚು ದಿನ ನಡೆಸಿದರೆ ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಬಹುದು’ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಶಾಸಕ ಸುರೇಶ್ ಗೌಡ, ‘ನಿರ್ಬಂಧ ಹೇರುವುದರ ಬದಲು, ಕಲಾಪಕ್ಕೆ ಪ್ರತಿ ದಿನ ತಪ್ಪದೇ ಹಾಜರಾಗುವವರಿಗೆ ಹೆಚ್ಚುವರಿಯಾಗಿ ₹5 ಕೋಟಿ ಅನುದಾನ ನೀಡಬೇಕು. ಹಾಜರಾತಿ ಹಾಕಿ ಒಂದು ಕ್ಷಣ ಕೂತು ಹೋಗುವುದಕ್ಕಿಂತ ದಿನವಿಡೀ ಕಲಾಪದಲ್ಲಿ ಪಾಲ್ಗೊಳ್ಳುವುದು ಮುಖ್ಯ. ಶಾಸಕರು ಮಾತ್ರವಲ್ಲ ಪ್ರತಿಯೊಬ್ಬ ಸಚಿವನೂ ಕಡ್ಡಾಯವಾಗಿ ಹಾಜರಿರಬೇಕು. ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರ ಕೇಂದ್ರಿತವಾಗಿ ಚರ್ಚೆ ನಡೆಯುತ್ತದೆ. ಆದರೆ ಆ ಕಡೆಯ ಶಾಸಕರಿಗೆ ಮಾತನಾಡಲು ಅವಕಾಶವೇ ಸಿಗುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.