ADVERTISEMENT

ಸವದತ್ತಿ: ಜನಸಾಗರದ ಮಧ್ಯೆ ಶಾಸಕ ಆನಂದ ಮಾಮನಿ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 14:43 IST
Last Updated 23 ಅಕ್ಟೋಬರ್ 2022, 14:43 IST
ಸವದತ್ತಿಯಲ್ಲಿ ಭಾನುವಾರ ಆನಂದ ಮಾಮನಿ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು
ಸವದತ್ತಿಯಲ್ಲಿ ಭಾನುವಾರ ಆನಂದ ಮಾಮನಿ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು   

ಸವದತ್ತಿ (ಬೆಳಗಾವಿ ಜಿಲ್ಲೆ): ಅನಾರೋಗ್ಯದಿಂದಾಗಿ ಶನಿವಾರ ರಾತ್ರಿ ನಿಧನರಾಗಿದ್ದ ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ (56) ಅವರ ಅಂತ್ಯಕ್ರಿಯೆ, ಇಲ್ಲಿನ ಯಡ್ರಾಂವಿ ರಸ್ತೆಯಲ್ಲಿರುವ ಅವರ ತೋಟದಲ್ಲಿ ಭಾನುವಾರ ಸಂಜೆ ನಡೆಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ರಾಜ್ಯದ ಹಲವು ಸಚಿವರು, ಶಾಸಕರು, ಮಠಾಧೀಶರು ಅಂತಿಮ ದರ್ಶನ ಪಡೆದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.

ಬಸವರಾಜ ಬೊಮ್ಮಾಯಿ ಅವರು ಆನಂದ ಮಾಮನಿ ಅವರ ಪತ್ನಿ ರತ್ನಾ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು

ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಅವರು ಆನಂದ ಅವರ ಪತ್ನಿ ರತ್ನಾ ಅವರಿಗೆ ಹಸ್ತಾಂತರಿಸಿದರು. ಇದಕ್ಕೂ ಮೊದಲು ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ತರಲಾಯಿತು.

ADVERTISEMENT

ಆನಂದ ಅವರ ತಂದೆ ಚಂದ್ರಶೇಖರ ಮತ್ತು ಸಹೋದರ ಬಾಪು ಅವರ ಸಮಾಧಿಗಳು ಇದೇ ತೋಟದಲ್ಲಿವೆ. ತಂದೆ ಸಮಾಧಿಯ ಪಕ್ಕದಲ್ಲೇ ಆನಂದ ಅವರನ್ನೂ ಸಮಾಧಿ ಮಾಡಲಾಯಿತು.

ವಿವಿಧ ಮಠಾಧೀಶರು ಲಿಂಗಾಯತ– ಪಂಚಮಸಾಲಿ ವಿಧಾನಗಳನ್ನು ಅನುಸರಿಸಿದರು. ಆನಂದ ಅವರ ತಾಯಿ ಗಂಗಮ್ಮ, ಪತ್ನಿ ರತ್ನಾ, 15 ವರ್ಷದ ಪುತ್ರಿ ಚೇತನಾ, 13 ವರ್ಷದ ಪುತ್ರ ಚಿನ್ಮಯ ಅವರನ್ನು ಜನ ಸಂತೈಸಿದರು.

ಅಕಾಲಿಕ ಅಗಲಿಕೆ: ಚಂದ್ರಶೇಖರ ಮತ್ತು ರತ್ನಮ್ಮ ದಂಪತಿ ಪುತ್ರನಾಗಿ 1966ರ ಜನವರಿ 18ರಂದು ಜನಿಸಿದ್ದರು. 2008ರಲ್ಲಿ ಮೊದಲು ವಿಧಾನಸಭೆಗೆ ಆಯ್ಕೆಯಾಗಿದ್ದರು. 2013, 2018ರಲ್ಲಿಯೂ ಪುನರಾಯ್ಕೆಯಾಗಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.