ADVERTISEMENT

ವಂಚನೆ ಆರೋಪ: ಶಾಸಕ ರಾಮದಾಸ್‌ ವಿರುದ್ಧ ವಿಚಾರಣೆಗೆ ಕೋರ್ಟ್ ಅಸ್ತು

ಮಾಜಿ ಸ್ನೇಹಿತೆಯ ಜೊತೆಗಿನ ಪ್ರೇಮ ಪ್ರಸಂಗ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:15 IST
Last Updated 1 ಜೂನ್ 2019, 20:15 IST
ಶಾಸಕ ಎಸ್‌.ಎ.ರಾಮದಾಸ್
ಶಾಸಕ ಎಸ್‌.ಎ.ರಾಮದಾಸ್   

ಬೆಂಗಳೂರು: ಮದುವೆಯಾಗುತ್ತೇನೆ ಎಂದು ನಂಬಿಸಿ ಕೈಕೊಟ್ಟು ಮಹಿಳೆಯೊಬ್ಬರನ್ನು ವಂಚಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೈಸೂರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ ಅನ್ನು ಜನಪ್ರತಿನಿಧಿಗಳ ಕೋರ್ಟ್‌ ವಜಾಗೊಳಿಸಿದೆ.

‘ನನ್ನನ್ನು ಮದುವೆಯಾಗುತ್ತೇನೆ. ‍ಪತ್ನಿಯ ಸ್ಥಾನ ನೀಡುತ್ತೇನೆ ಎಂದು ನಂಬಿಸಿ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದರು. ಆದರೆ ಮದುವೆಯಾಗದೆ ಮೋಸ ಮಾಡಿದ್ದಲ್ಲದೆ ಕಿರಿಯ ಸಹೋದರ ಶ್ರೀಕಾಂತದಾಸ್‌ ಅವರಿಂದ ನನಗೆ ಜೀವ ಬೆದರಿಕೆ ಹಾಕಿಸಿದ್ದಾರೆ’ ಎಂದು ಸಂತ್ರಸ್ತೆಯು ರಾಮದಾಸ್, ಶ್ರೀಕಾಂತದಾಸ್ ವಿರುದ್ಧ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ 2014ರ ಫೆಬ್ರುವರಿ 14ರಂದು ದೂರು ನೀಡಿದ್ದರು.

ಈ ದೂರನ್ನು ಆಧರಿಸಿ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ‘ಬಿ‘ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ಸಂತ್ರಸ್ತೆ, ‘ಬಿ’ ರಿಪೋರ್ಟ್‌ ರದ್ದುಗೊಳಿಸಬೇಕು ಎಂದು ಕೋರಿ ‘ಪ್ರತಿಭಟನಾ ಅರ್ಜಿ’ ಸಲ್ಲಿಸಿದ್ದರು.

ADVERTISEMENT

ಈ ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ಶನಿವಾರ ಪ್ರಕಟಿಸಿದರು.

‘ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಮತ್ತೆ ವಿಚಾರಣೆ ನಡೆಸುವುದಿಲ್ಲ. ಫಿರ್ಯಾದುದಾರರು ನೀಡಿರುವ ಹೇಳಿಕೆ ಗಮನಿಸಿದಾಗ ಇದು ಸಂಜ್ಞೇಯ ಅಪರಾಧವಾಗಿರುವುದು ಮೇಲ್ನೋಟಕ್ಕೆ ಖಾತರಿಯಾಗುತ್ತದೆ. ಆದ್ದರಿಂದ, ಇದು ವಿಚಾರಣೆಗೆ ಅರ್ಹವಾದ ಪ್ರಕರಣ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

‘ಆರೋಪಿಯು ಸಚಿವರಾಗಿದ್ದ ವೇಳೆ ತಡರಾತ್ರಿಯಲ್ಲಿ ಸಂತ್ರಸ್ತೆಯ ಮನೆಗೆ ಖಾಸಗಿ ಕಾರಿನಲ್ಲಿ ಬೆಂಗಾವಲು ಪಡೆ ಇಲ್ಲದೇ ಹೋಗುತ್ತಿದ್ದರು ಮತ್ತು ನಸುಕಿನಲ್ಲಿ ನಿರ್ಗಮಿಸುತ್ತಿದ್ದರು. ಆರೋಪಿ ಪ್ರಭಾವಿ ವ್ಯಕ್ತಿ ಎಂಬುದನ್ನು ಗಮನಿಸಿದಾಗ ಪೊಲೀಸರು ಪ್ರಕರಣದ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯವು ರಾಮದಾಸ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 420 (ನಂಬಿಸಿ ವಂಚಿಸುವುದು) ಮತ್ತು 506ರ (ಜೀವ ಬೆದರಿಕೆ) ಅಡಿಯಲ್ಲಿ ಕೇಸು ದಾಖಲು ಮಾಡಿಕೊಂಡು ಅವರಿಗೆ ಸಮನ್ಸ್‌ ಜಾರಿಗೊಳಿಸಬೇಕು’ ಎಂದು ಆದೇಶಿಸಲಾಗಿದೆ.

ಸಂತ್ರಸ್ತೆ ಪರ ಎನ್‌.ಪಿ.ಅಮೃತೇಶ್‌ ವಾದ ಮಂಡಿಸಿದ್ದರು.

ಪ್ರತಿದೂರು:‘ಸಂತ್ರಸ್ತೆಯು ನನ್ನನ್ನು ಬೆದರಿಸಿ ಹಣ ಕೀಳಲು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ನಾನು ಮಣಿಯದೇ ಹೋದಾಗ ಆಕೆ ಮತ್ತು ಆಕೆಯ ಸಂಬಂಧಿಕರು ನನ್ನ ಹೆಸರು ದುರ್ಬಳಕೆ ಮಾಡಿ ಅಪಪ್ರಚಾರ ನಡೆಸಿದ್ದಾರೆ’ ಎಂದು ರಾಮದಾಸ್ ಅವರು ಸಂತ್ರಸ್ತೆಯ ವಿರುದ್ಧ ಕುವೆಂಪು ನಗರ ಪೊಲೀಸರಿಗೆ ಪ್ರತಿ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.