ADVERTISEMENT

ಎಸ್‌ಎಸ್‌ಎಲ್‌ಸಿ ಪಾಸಾಗದವರ ಬಳಿ ಎರಡೆರಡು ಖಾತೆ: ಸುಧಾಕರ್‌

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬ್ರೇಕ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 6:35 IST
Last Updated 7 ಜನವರಿ 2019, 6:35 IST
ಕೆ.ಸುಧಾಕರ್‌
ಕೆ.ಸುಧಾಕರ್‌    

ಬೆಂಗಳೂರು: ‘ನಾನೇನು ಮಾಲಿನ್ಯ ನಿಯಂತ್ರಣ ಮಂಡಳಿಯೇ ಬೇಕೆಂದು ಅರ್ಜಿ ಹಾಕಿರಲಿಲ್ಲ. ಜೆಡಿಎಸ್‌ ಪಕ್ಷದವರು ಬೇಕಾದರೆ ಅದನ್ನುತಮ್ಮ ಕುಟುಂಬಕ್ಕೆ ಕೊಡಲಿಪಾಪ. ಬೇಡ ಎಂದವರುಯಾರು? ಆದರೆ, ತಾಂತ್ರಿಕ ಕಾರಣದ ನೆಪ ಹೇಳುವುದು ಬೇಡ’ ಎಂದು ಶಾಸಕ ಡಾ.ಸುಧಾಕರ್‌ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಸೂಚಿಸಿದ್ದ 19 ಶಾಸಕರ ಪೈಕಿ ಐವರ ಹೆಸರನ್ನು ಕೈಬಿಟ್ಟು 14 ನಿಗಮ– ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿದ್ದ ಮುಖ್ಯಮಂತ್ರಿ ನಡೆಗೆ ಸುಧಾಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಎಸ್‌ಎಸ್‌ಎಲ್‌ಸಿ ಪಾಸಾಗದವರು ಎರಡೆರಡು ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ, ಮಂಡಳಿ ಸ್ಥಾನ ನೀಡುವುದಕ್ಕೆ ತಾಂತ್ರಿಕ ಕಾರಣದ ನೆಪ ಹೇಳುತ್ತಿದ್ದಾರೆ. ಯಾವ ಸದುದ್ದೇಶದಿಂದ ಮುಖ್ಯಮಂತ್ರಿ ಇದಕ್ಕೆ ಬ್ರೇಕ್‌ ಹಾಕಿದ್ದಾರೊ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ನಮ್ಮ ಭಾಗದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಗೊಳಿಸಲು ಸಚಿವ ಸ್ಥಾನ ಕೇಳಿದ್ದೆ. ಈ ಬಗ್ಗೆ ಹೈಕಮಾಂಡ್‌ ಯೋಚಿಸಬೇಕು. ಕೆಲವು ಅಧಿಕಾರಿಗಳು ನಿವೃತ್ತಿಯ ಬಳಿಕವೂ ಅಧಿಕಾರದ ಆಸೆ ಹೊಂದಿದ್ದಾರೆ.ಇದು ನನ್ನ ಅಥವಾ ಎಸ್‌.ಟಿ.ಸೋಮಶೇಖರ್‌ ಅಥವಾ ಸುಬ್ಬಾರೆಡ್ಡಿ ಅವರ ಪ್ರಶ್ನೆ ಅಲ್ಲ. ಮಂಡಳಿಯನ್ನು ನಿಯಂತ್ರಿಸಲು ರಾಜಕೀಯ ಇಚ್ಛಾಶಕ್ತಿ ಬೇಕು. ಎಲ್ಲವನ್ನೂ ಅಧಿಕಾರಿಗಳೇ ಮಾಡುವುದಾದರೆ ಮುಖ್ಯಮಂತ್ರಿ ಯಾಕೆ ಬೇಕು? ಮುಖ್ಯ ಕಾರ್ಯದರ್ಶಿ ಇದ್ದರೆ ಸಾಕಲ್ಲವೇ?’ ಎಂದು ಪ್ರಶ್ನಿಸಿದರು.

‘ಹೈಕಮಾಂಡ್ ಶಿಫಾರಸು ಮಾಡಿರುವ ಪಟ್ಟಿಯನ್ನು ಮುಖ್ಯಮಂತ್ರಿ ಪ್ರಶ್ನೆ ಮಾಡಿಲ್ಲ. ಜೊತೆಗೆ ಪಟ್ಟಿಯನ್ನು ತಿರಸ್ಕರಿಸಿಯೂ ಇಲ್ಲ. ಆದರೆ, ಯಾವ ಕಾರಣಕ್ಕೆ ಕೆಲ ಶಾಸಕರ ಹೆಸರಿಗೆ ಅಂಕಿತ ಹಾಕಿಲ್ಲವೋ ಗೊತ್ತಿಲ್ಲ. ಪಕ್ಷ ನೀಡಿರುವ ಪಟ್ಟಿಗೆ ಅಂಕಿತ ಹಾಕುವಂತೆ ನಾನೇ ಮನವಿ ಮಾಡುತ್ತೇನೆ’ ಎಂದುಉಪ‌ಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.

‘ಎಸ್.ಟಿ ಸೋಮಶೇಖರ್ ಗೆ ಬಿಡಿಎ ಅಧ್ಯಕ್ಷ ಸ್ಥಾನ ತಪ್ಪಿಸಿದರು ಎಂಬ ಆರೋಪ‌ಸುಳ್ಳು. ದೆಹಲಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಬಿಡಿಎ ಅಧ್ಯಕ್ಷ ಸ್ಥಾನವನ್ನು ಸೋಮಶೇಕರ್‌ ಅವರಿಗೆ ಕೊಡುವ ಬಗ್ಗೆ ಸಲಹೆ ಬಂದಿತ್ತು. ಆಗ ನಾನು ಅದನ್ನು ಒಪ್ಪಿಕೊಂಡಿದ್ದೆ. ಇಲ್ಲದಿದ್ದರೇ ಅಂದೇ ತಿರಸ್ಕರಿಸುತ್ತಿದೆ. ಇನ್ನೊಬ್ಬರ ಅವಕಾಶ ತಪ್ಪಿಸುವ ದುರದ್ದೇಶ ನನಗಿಲ್ಲ‘ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.