ADVERTISEMENT

18 ಶಾಸಕರ ಅಮಾನತು ರದ್ದು ನಾನೊಬ್ಬನೇ ನಿರ್ಧರಿಸಲಾಗದು: ಸ್ಪೀಕರ್ ಖಾದರ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 8:25 IST
Last Updated 27 ಏಪ್ರಿಲ್ 2025, 8:25 IST
ಯು.ಟಿ. ಖಾದರ್ 
ಯು.ಟಿ. ಖಾದರ್    

ಮಂಗಳೂರು: ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಬಿಜೆಪಿಯ 18 ಶಾಸಕರ ಅಮಾನತು ಮಾಡಿದ್ದು ಸದನದ ತೀರ್ಮಾನ. ಆದ್ದರಿಂದ ಅವರ ಅಮಾನತು ಹಿಂಪಡೆಯುವ ವಿಚಾರದಲ್ಲೂ ನಾನೊಬ್ಬನೇ ತೀರ್ಮಾನ ಕೈಗೊಳ್ಳಲಾಗದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಇಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ' ಪೀಠದ ಗೌರವ ಉಳಿಸಲು ಆರು ತಿಂಗಳವರೆಗೆ ಅಮಾನತು ಮಾಡಲಾಗಿದೆ. ಸಮಿತಿ ಸಭೆಯಲ್ಲೂ ಭಾಗವಹಿಸಬಾರದು ಎಂದು ಸೂಚಿಸಲಾಗಿದೆ. ತಪ್ಪಿನ ಅರಿವು ಅವರಿಗೆ ಆಗಬೇಕು. ಇದು ಅವರಿಗೆ ಕೊಟ್ಟಿರುವ ಶಿಕ್ಷೆಯಲ್ಲ. ಮುಂದೆ ಉತ್ತಮ ನಾಯಕರಾಗಿ ಬೆಳೆಯುವುದಕ್ಕೆ ಶಾಸಕರಿಗೆ ಕೊಟ್ಟಿರುವ ಸವಾಲು ಇದು ಎಂದರು.

ಅಮಾನತು ರದ್ದತಿ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಅವರು ಹೇಳಿದರು‌.

ADVERTISEMENT

ಶಾಸಕರನ್ನು ಅಮಾನತುಗೊಳಿಸಿದ ವಿಚಾರದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ವಿರುದ್ಧ ಶಾಸಕ‌ ಹರೀಶ್ ಪೂಂಜಾ ನೀಡಿರುವ ಹೇಳಿಕೆ ವಿರುದ್ಧ ಹಕ್ಕುಚ್ಯುತಿಗೆ ಕೆಲ ಕಾಂಗ್ರೆಸ್ ಶಾಸಕರು ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಕೆಲ ಶಾಸಕರಿಗೆ ಏನಾದರೂ ಮಾತನಾಡುವ ಚಾಳಿ ಇದೆ. ತಮಗೆ ಪ್ರಚಾರ ಸಿಗುತ್ತದೆ ಎಂದು ಆ ರೀತಿ ಮಾತನಾಡ್ತಾರೆ. ಅವರ ಹೇಳಿಕೆ ಸಂವಿಧಾನಕ್ಕೆ ಬದ್ಧವಾಗಿರಬೇಕು. ಈ ಕುರಿತು ಶಾಸಕರು ಹಕ್ಕುಚ್ಯುತಿ ಸಮಿತಿಗೆ ದೂರು ಕೊಟ್ಟಿದ್ದಾರೆ. ಸಮಿತಿಯೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ನಿವೃತ್ತ ಡಿಜಿಪಿ ಮತ್ತು ಐಜಿಪಿ ಓಂ‌ ಪ್ರಕಾಶ್ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಕೈವಾಡದ ಇದೆ ಎಂದು ಈ ಹಿಂದೆ ಡಿವೈಎಸ್ಪಿಯಾಗಿದ್ದು, ಹುದ್ದೆಗೆ ರಾಜೀನಾಮೆ ನೀಡಿದ್ದ ಅನುಪಮಾ ಶೆಣೈ ಆರೋಪಿಸಿರುವ ಕುರಿತು ಮತ್ತು ಈ ಬಗ್ಗೆ ಪತ್ರ ಬರೆದ ಕುರಿತು ಪ್ರತಿಕ್ರಿಯಿಸಿದ ಖಾದರ್,'ನಾನು ತನಿಖಾ ಏಜೆನ್ಸಿ ಅಲ್ಲ. ನಾನು ಸಾರ್ವಜನಿಕ ಹುದ್ದೆಯಲ್ಲಿರುವವನು‌. ಅವರು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಿ. ನನ್ನ ಕಚೇರಿಗೆ ಪತ್ರ ಬಂದಿದೆಯೇ ಎಂದು ಪರಿಶೀಲನೆ ನಡೆಸುತ್ತೇನೆ. ಅವರಲ್ಲಿ ನಿಜವಾಗಿಯೂ ಪುರಾವೆಗಳಿದ್ದಲ್ಲಿ ತನಿಖಾ‌ ಸಂಸ್ಥೆಗೆ ಕೊಡಲಿ' ಎಂದರು.

ಪಹಲ್ಗಾಮ್ ಉಗ್ರರ ದಾಳಿ ಪ್ರಕರಣದಲ್ಲಿ 'ಯುದ್ಧ ಬೇಡ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, 'ನಮ್ಮ ದೇಶದ ಏಕತೆ, ಒಗ್ಗಟ್ಟನ್ನು ಮುರಿಬೇಕೆಂಬುದೇ ಈ ಸಂಚಿನ ಉದ್ದೇಶ. ಅದಕ್ಕೆ ನಾವು ಆಸ್ಪದ ಕೊಡಬಾರದು. ದುರ್ಬಲಗೊಳಿಸಲು‌ ನಾವು ಪ್ರಯತ್ನ ಪಟ್ಟರೆ ಸಂಚುಕೋರರಿಗೆ ಸಹಾಯ ಮಾಡಿದ ಹಾಗಾಗುತ್ತದೆ. ಕೃತ್ಯ ಎಸಗಿದರನ್ನು ಮತ್ತು ಬೆಂಬಲ‌ ನೀಡಿದವರನ್ನು ಮಟ್ಟ ಹಾಕಬೇಕು. ಯುದ್ದ ನಡೆಸುವ ಬಗ್ಗೆ ಸರ್ವಪಕ್ಷ ಸಭೆ, ಅಧಿಕಾರಿಗಳು, ಕೇಂದ್ರ ಸರ್ಕಾರ‌ ನಿರ್ಧಾರ ಮಾಡುತ್ತದೆ. ಈ ವಿಚಾರದಲ್ಲಿ ಇಡೀ‌ ದೇಶ ಒಗ್ಗಟ್ಟಾಗಿರಬೇಕು' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.