ADVERTISEMENT

ಕೋರ್ಟ್ ಮೆಟ್ಟಿಲೇರಲು ಅನರ್ಹರು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 17:57 IST
Last Updated 28 ಜುಲೈ 2019, 17:57 IST
   

ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದಕ್ಕೆ ಎಲ್ಲ 14 ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆಯುವುದಾಗಿ ಹೇಳಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮುಖಂಡರು ತೀರ್ಪು ಸ್ವಾಗತಿಸಿದ್ದರೆ, ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಪ್ರತಿಕ್ರಿಯೆಗಳು ಇಲ್ಲಿವೆ.

‘ರಾಜಕೀಯ ಪ್ರೇರಿತ ನಿರ್ಧಾರ’
ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಇತಿಹಾಸ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದರು. ರಾಜಕೀಯ ಪ್ರೇರಿತವಾಗಿ, ನಾಯಕರುಗಳಿಗೆ ಮಣಿದುಈ ರೀತಿಯ ತಪ್ಪು ನಿರ್ಧಾರ ಕೈಗೊಂಡಿದ್ದಾರೆ. ಅನರ್ಹಗೊಂಡ ಎಲ್ಲಶಾಸಕರು ಕಾನೂನು ಹೋರಾಟ ಮಾಡುತ್ತೇವೆ.

ಈ ತೀರ್ಪನ್ನು ಜನರು ಒಪ್ಪುವುದಿಲ್ಲ. ಸೋಮವಾರವಿಧಾನಸಭೆಯಲ್ಲಿ ಬಹುಮತ ಮಂಡನೆ ಮಾಡುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ.ಕೇವಲ ಸಿದ್ದರಾಮಯ್ಯ, ಕುಮಾರಸ್ವಾಮಿ ದೂರು ಮಾತ್ರ ಪರಿಗಣಿಸಿದ್ದು, ದೂರುದಾರರ ಮನವಿ ಪರಿಗಣಿಸಿಲ್ಲ. ಹಣ, ಅಧಿಕಾರಕ್ಕಾಗಿ ನಾವು ರಾಜೀನಾಮೆ ಕೊಟ್ಟಿಲ್ಲ. ಹೇಸಿಗೆ ಸರ್ಕಾರದ ದುರಾಡಳಿತದ ವಿರುದ್ಧ ‌ರಾಜೀನಾಮೆ‌ ನೀಡಿದ್ದೇವೆ.
-ಎಚ್.ವಿಶ್ವನಾಥ್

ADVERTISEMENT

‘ಸರ್ಕಾರ ತೆಗೆದಿದ್ದು ನಾವಲ್ಲ’
‘ಸರ್ಕಾರ ತೆಗೆದಿದ್ದು ನಾವಲ್ಲ.ನಮ್ಮ ನಾಯಕರು ಹೇಳಿದ್ದರಿಂದ ಈ ರೀತಿ ಮಾಡಿದ್ದೇವೆ. ಕಳೆದ ಮೂರು ತಿಂಗಳಿಂದ ಸರ್ಕಾರ ತೆಗೆಯಬೇಕು ಎಂದು ಹೇಳಿದವರು ಯಾರು. ಲೋಕಸಭೆ ಚುನಾವಣೆ ವರೆಗೂ ಕಾಯಿರಿ ಎಂದವರು ಈಗ ಸರ್ಕಾರ ತೆಗೆಯಿರಿ ಎಂದು ಪ್ರಚೋದನೆ ನೀಡಿದವರು ಯಾರು. ರಾಜೀನಾಮೆ ನೀಡಿ, ಮುಂಬೈಗೆ ಹೋಗಲು ಕುಮ್ಮಕ್ಕು ಕೊಟ್ಟವರು ಯಾರು. ಅಪ್ಪ– ಮಕ್ಕಳದ್ದು ಜಾಸ್ತಿ ಆಯಿತು ಎಂದವರು ಯಾರು?’.

ಪಕ್ಷ ಬಿಡುವಂತೆ ಮಾಡಿದವರು ಜೆಡಿಎಸ್‌ ನವರಿಗೆ ಸಮಾಧಾನ ಮಾಡಲು ನಮ್ಮ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ತಿರುಗಿ ಬೀಳದಿರಲಿ ಎಂಬ ಕಾರಣಕ್ಕೆ ಇಂತಹ ನಾಟಕ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಗೆ ದೇವೇಗೌಡರು ಸುಮ್ಮನೆ ದೂರು ಕೊಡಲಿಲ್ಲ. ಈಗ ಎಲ್ಲರೂ ನಾಟಕವಾಡುತ್ತಿದ್ದಾರೆ. ಸರ್ಕಾರ ತೆಗೆಯಬೇಕಿತ್ತು, ತೆಗೆದಿದ್ದಾರೆ.
-ಮುನಿರತ್ನ

‘ಹಕ್ಕುಗಳ ಮೇಲೆ ಸವಾರಿ’
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಾಳಕ್ಕೆ ತಕ್ಕಂತೆ ಸಭಾಧ್ಯಕ್ಷರು ಕುಣಿಯುತ್ತಿದ್ದಾರೆ. ಮೈತ್ರಿ ನಾಯಕರು ಹಾಗೂ ಸಭಾಧ್ಯಕ್ಷರು ನಮ್ಮ ಹಕ್ಕು, ಆಲೋಚನೆಗಳ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬುದು ಎಂತಹವರಿಗೂ ಗೊತ್ತಾಗುತ್ತದೆ. ರಾಜೀನಾಮೆ ನೀಡಿದವರನ್ನೂ ಅನರ್ಹಗೊಳಿಸಿದರೆ ಪ್ರಜಾಪ್ರಭುತ್ವದ ಕಗ್ಗೊಲೆಯಾದಂತೆ.

ಕಾರ್ಯಕರ್ತರು, ಕ್ಷೇತ್ರದಲ್ಲಿರುವ ಬೆಂಬಲಿಗರು ಗಾಬರಿಗೆ ಒಳಗಾಗುವುದು ಬೇಡ. ಈ ವಿಚಾರದಲ್ಲಿ‌ ನ್ಯಾಯ ನಮ್ಮ ಪರವಾಗಿಯೇ ಇದೆ. ಕಾನೂನು ಹೋರಾಟದಲ್ಲಿ ಗೆದ್ದು ಬರುತ್ತೇನೆ.
-ಬಿ.ಸಿ.ಪಾಟೀಲ

‘ರಾಜೀನಾಮೆ ಅಂಗೀಕರಿಸಬೇಕಿತ್ತು’
ಅನರ್ಹತೆ ಅರ್ಜಿಗಿಂತ ಮೊದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಮೊದಲು ರಾಜೀನಾಮೆ ಅಂಗೀಕರಿಸಬೇಕಿತ್ತು. ಆದರೆ, ಅದನ್ನು ತಿರಸ್ಕರಿಸಿ ಅನರ್ಹತೆ ಅರ್ಜಿ ಕೈಗೆತ್ತಿಕೊಂಡು ತೀರ್ಪು ನೀಡಿದ್ದಾರೆ.
-ಪ್ರತಾಪಗೌಡ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.