ADVERTISEMENT

ಸಚಿವ ಸುಧಾಕರ್‌ ಹೇಳಿಕೆಗೆ ಯಾವ್ಯಾವ ಶಾಸಕರು ಏನಂದ್ರು?

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 20:40 IST
Last Updated 24 ಮಾರ್ಚ್ 2021, 20:40 IST
ಡಾ.ಕೆ. ಸುಧಾಕರ್‌
ಡಾ.ಕೆ. ಸುಧಾಕರ್‌   

ಬೆಂಗಳೂರು: ‘ರಾಜ್ಯದ ಯಾವ ಶಾಸಕರೂ ಏಕ ಪತ್ನಿ ವ್ರತಸ್ಥರಲ್ಲ’ ಎಂಬ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವರ ಹೇಳಿಕೆಯನ್ನು ಕಟುವಾದ ಮಾತುಗಳಿಂದ ಖಂಡಿಸಿದ್ದಾರೆ.

‘ಮೂರ್ಖತನದ ಪರಮಾವಧಿ’

ಸಚಿವ ಸುಧಾಕರ್‌ ಎಲ್ಲ ಶಾಸಕರ ಕ್ಷಮೆ ಯಾಚಿಸಬೇಕು. ಜವಾಬ್ದಾರಿ ಸ್ಥಾನದಲ್ಲಿರುವವರು ಸದನದಲ್ಲಿ ಉತ್ತರ ಕೊಡಬೇಕಿತ್ತು. 225 ಜನರಲ್ಲಿ ಶಾಸಕಿಯರೂ ಇದ್ದಾರೆ. ಅವರಿಗೆ ಮನೆಯಲ್ಲಿ ಕುಟುಂಬದ ಸದಸ್ಯರಿದ್ದಾರೆ. ಮಹಿಳೆಯರಿಗೆ ಅವಮಾನವಾಗುತ್ತದೆ. ಈ ಹೇಳಿಕೆಯಿಂದ ನಿಮಗೆ ಒಳ್ಳೆದಾಗುತ್ತದೆ ಎಂದು ಭಾವಿಸಿದರೆ ಮೂರ್ಖತನದ ಪರಮಾವಧಿ. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಲಿದೆ.

ADVERTISEMENT

– ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ

‘ಅವರು ಒಪ್ಪಿಕೊಂಡಂತೆ ಆಗಿದೆ’

ಅವರ ಹೇಳಿಕೆ ತಪ್ಪು. ನಾನು ನೂರಕ್ಕೆ ನೂರು ಏಕಪತ್ನಿ ವೃತಸ್ಥ. ನನಗೆ ಒಬ್ಬಳೇ ಹೆಂಡತಿ. ಯಾವುದೇ ದೇವರ ಎದುರು ಬಂದು ಪ್ರಮಾಣ ಮಾಡಲು ಸಿದ್ಧ. ಅವರು ತಮ್ಮನ್ನೂ ಸೇರಿಸಿಕೊಂಡು ಹೇಳಿದ್ದಾರೆ. ಅವರಿಗೆ ಸಂಬಂಧ ಇರುವುದನ್ನು ಒಪ್ಪಿಕೊಂಡಂತೆ ಆಗಿದೆ. 225 ಜನರ ಹೆಸರು ಹೇಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸಚಿವರ ಘನತೆಗೆ ತಕ್ಕ ಮಾತು ಅಲ್ಲ. ಬಾಯಿ ತಪ್ಪಿಯೂ ಇಂತಹ ಮಾತು ಹೇಳಬಾರದಿತ್ತು.

– ಕೆ.ಎಂ. ಶಿವಲಿಂಗೇಗೌಡ, ಜೆಡಿಎಸ್‌ ಶಾಸಕ

ಸುಧಾಕರ್‌ಗೆ ಮಾಡಲಿಕ್ಕೆ ಕೆಲಸ ಇಲ್ಲ

ಸುಧಾಕರ್‌ಗೆ ಮಾಡೋಕೆ ಕೆಲಸ ಇಲ್ಲದೆ ಈ ರೀತಿ ಹೇಳಿಕೆ ನೀಡಿದ್ದಾರೆ. ಕೆಲಸ ಕೊಡಿಸುತ್ತಾರೆಂದು ಬಂದ ಹೆಣ್ಣು ಮಗಳನ್ನು ದುರ್ಬಳಕೆ ಮಾಡಿದ್ದಾರೆ (ಸಿ.ಡಿ ಪ್ರಕರಣ). ಆ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ನ್ಯಾಯ ಸಿಗಬೇಕೆಂದು ನಾವು (ಕಾಂಗ್ರೆಸ್‌) ಕೇಳುತ್ತಿದ್ದೇವೆ. ಪ್ರಕರಣವನ್ನು ಸಿಬಿಐಗೆ ಕೊಡಲಿ. ಕೋರ್ಟ್‌ಗೆ ಹೋಗಿ ಸಚಿವರು ತಡೆಯಾಜ್ಞೆ ಯಾಕೆ ತರಬೇಕು.

– ಸೌಮ್ಯಾರೆಡ್ಡಿ, ಕಾಂಗ್ರೆಸ್‌ ಶಾಸಕಿ

ಮಾನಸಿಕ ಸಮತೋಲನ ತಪ್ಪಿದೆ

‘ಅವರಿಗೆ (ಸುಧಾಕರ್‌ಗೆ) ಮಾನಸಿಕ ಸಮತೋಲನ ತಪ್ಪಿದಂತೆ ಕಾಣುತ್ತಿದೆ. 225 ಶಾಸಕರೂ ಎಂದು ಅವರು ಹೇಳಿದ್ದಾರೆ. ಅವರಲ್ಲಿ ಹೆಣ್ಣು ಮಕ್ಕಳು ಶಾಸಕರೂ ಇದ್ದಾರಲ್ಲಾ. ಅವರನ್ನೆಲ್ಲ ಸೇರಿಸಿ ಹೇಳಿದಂತೆ ಆಯಿತಲ್ಲ. ಸ್ಪೀಕರ್‌, ಎಲ್ಲರೂ ಅಂಥವರೇ ಆದರೆ ಸದನದ ಪಾವಿತ್ರ್ಯತೆ ಏನು ಉಳಿಯುತ್ತದೆ. ಅವರದೇ ಮುಖ್ಯಮಂತ್ರಿ ಅಲ್ವಾ. ನನ್ನ ಬಗ್ಗೆಯೂ ಹೇಳಿದ್ದಾರೆ. ನನ್ನ ವಿರುದ್ಧ ಯಾವ ತನಿಖೆ ಬೇಕಾದರೂ ಮಾಡಲಿ.

– ಕೆ.ಆರ್‌. ರಮೇಶ್‌ ಕುಮಾರ್‌, ಕಾಂಗ್ರೆಸ್‌ ಶಾಸಕ

ಯಾವ ದೃಷ್ಟಿಕೋನದಲ್ಲಿ ಯಾವ ಕಾರಣಕ್ಕೆ ಕೊಟ್ಟಿದ್ದಾರೊ ಗೊತ್ತಿಲ್ಲ. ಮಾತನಾಡಲು ಶಾಸಕರಿಗೆ ವೈಯಕ್ತಿಕ ಸ್ವಾತಂತ್ರ್ಯ ಇದೆ. ಆದರೆ, ಎಲ್ಲ ಶಾಸಕರ ಬಗ್ಗೆ ಮಾತನಾಡುವ ಸ್ವಾತಂತ್ರ್ಯ ಅವರಿಗೆ ಇಲ್ಲ. ಅವರ ಹೇಳಿಕೆ ತಪ್ಪು

– ರೂಪಾ ಶಶಿಧರ್, ಕಾಂಗ್ರೆಸ್‌ ಶಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.