ADVERTISEMENT

ಪತ್ರ ಬರೆದ ಶಾಸಕರು ಕ್ಷಮೆ ಕೇಳಿದ್ದಾರೆ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 28 ಜುಲೈ 2023, 9:42 IST
Last Updated 28 ಜುಲೈ 2023, 9:42 IST
ಜಿ.ಪರಮೇಶ್ವರ
ಜಿ.ಪರಮೇಶ್ವರ   

ತುಮಕೂರು: ‘ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಪತ್ರ ಬರೆದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕ್ಷಮೆ ಕೇಳಿದ್ದಾರೆ. ಗೊತ್ತಾಗದೆ ಪತ್ರ ಬರೆದು ತಪ್ಪು ಮಾಡಿರುವುದಾಗಿ ಹೇಳಿದ್ದಾರೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪತ್ರ ಬರೆಯುವುದು ಅಷ್ಟೊಂದು ಸೂಕ್ತವಲ್ಲ. ಮೌಖಿಕವಾಗಿ ಹೇಳಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯುತ್ತಿದ್ದೆ. ಪತ್ರ ಬರೆದು ಸಹಿ ಅಭಿಯಾನ ನಡೆಸುವ ಸಂಪ್ರದಾಯ ಬೇಡವೆಂದು ಸಿದ್ದರಾಮಯ್ಯ ಅವರು ಶಾಸಕರಿಗೆ ತಾಕೀತು ಮಾಡಿದ್ದಾರೆ’ ಎಂದು ಹೇಳಿದರು.

ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಯಾವುದೇ ರೀತಿಯಲ್ಲೂ ಅಸಮಾಧಾನ ಹೊರ ಹಾಕಿಲ್ಲ. ಸಭೆಯಲ್ಲಿ ಶಾಸಕ ಬಿ.ಆರ್.ಪಾಟೀಲ್ ರಾಜೀನಾಮೆ ನೀಡಲು ಮುಂದಾದ ವಿಚಾರ ಸುಳ್ಳು. ಅಂತಹ ಪ್ರಸಂಗ ಸಭೆಯಲ್ಲಿ ನಡೆದಿಲ್ಲ. ಕೆಲವರು ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೇಳಿಕೊಂಡಿದ್ದರು. ಅದರಂತೆ ಸಭೆ ನಡೆದಿದ್ದು, ಕೆಲ ವಿಚಾರಗಳು ಚರ್ಚೆಯಾಗಿವೆ ಎಂದು ತಿಳಿಸಿದರು.

ADVERTISEMENT

ಸಚಿವರು ಇನ್ನೂ ಹೆಚ್ಚಿನ ರೀತಿಯಲ್ಲಿ ಶಾಸಕರಿಗೆ ಸ್ಪಂದಿಸಬೇಕು ಎಂಬ ವಿಚಾರ ಪ್ರಸ್ತಾಪವಾಗಿದೆ. ಪ್ರತಿ ಜಿಲ್ಲೆಯ ಶಾಸಕರು ಹಾಗೂ ಉಸ್ತುವಾರಿ ಸಚಿವರ ಸಭೆಯನ್ನು ಪ್ರತ್ಯೇಕವಾಗಿ ಕರೆದು ಚರ್ಚಿಸಿ, ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.