ADVERTISEMENT

ಶಿಕ್ಷಕರ ಕ್ಷೇತ್ರ: ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಚಿಂತನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 21:25 IST
Last Updated 19 ಜನವರಿ 2024, 21:25 IST
   

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅಥವಾ ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥನಾರಾಯಣ ಗೌಡ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಚಿಂತನೆ ನಡೆಸಿದೆ.

ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಕಣಕ್ಕೆ ಇಳಿಯುತ್ತಿದ್ದಾರೆ ಎಂದು ಜೆಡಿಎಸ್‌ ಮುಖಂಡರು ಘೋಷಿಸಿದ ಬೆನ್ನಲ್ಲೇ, ಬಿಜೆಪಿ ಸಹ ತನ್ನ ಅಭ್ಯರ್ಥಿ ಕಣಕ್ಕೆ ಇಳಿಸುವ ಕುರಿತು ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಜೆಪಿ ಭವನದಲ್ಲಿ ಗುರುವಾರ ನಡೆದ ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷದ ಮುಖಂಡರ ಸಭೆಯಲ್ಲಿ ಎ.ಪಿ.ರಂಗನಾಥ್ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಮುಖಂಡ ಎಚ್‌.ಎಂ.ರಮೇಶ್‌ ಗೌಡ ಘೋಷಿಸಿದ್ದರು.

ADVERTISEMENT

ಜೆಡಿಎಸ್‌ ಪಕ್ಷ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ. ಲೋಕಸಭೆ ಚುನಾವಣೆಯಲ್ಲಿನ ಸ್ಥಾನ ಹಂಚಿಕೆ ಕುರಿತು ಮಾತುಕತೆಯೂ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಡುವ ನಿರ್ಧಾರವನ್ನು ಎರಡೂ ಪಕ್ಷದ ನಾಯಕರು ಮಾಡಿದ್ದಾರೆ. 

ವಿಧಾನಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ವಿರುದ್ಧ ಮೈತ್ರಿಕೂಟದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಅದು, ಅಂತಿಮಗೊಳ್ಳುವ ಮೊದಲೇ, ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಚುನಾವಣೆ ಎದುರಾಗುವ ಮೊದಲೇ ಎರಡೂ ಪಕ್ಷಗಳ ಮಧ್ಯೆ ಸಮನ್ವಯ ಇಲ್ಲದೇ ಇರುವುದನ್ನು ಇದು ತೋರಿಸಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.