ADVERTISEMENT

ದಕ್ಷಿಣ ಪದವೀಧರರ ಕ್ಷೇತ್ರ: ಪ್ರಸನ್ನಗೆ ದೊರೆತ ಮತ ವಿನಯ್ ಬಂಡಲ್‌ನಲ್ಲಿ!

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 1:04 IST
Last Updated 16 ಜೂನ್ 2022, 1:04 IST
   

ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ನಡೆದಿದ್ದು, ಪಕ್ಷೇತರ ಅಭ್ಯರ್ಥಿ ಪ್ರಸನ್ನ ಎನ್.ಗೌಡ ಅವರಿಗೆ ದೊರೆತ ಮತ (ಪ್ರಥಮ ಪ್ರಾಶಸ್ತ್ಯ)ದ ಚೀಟಿ ಪಕ್ಷೇತರ ಅಭ್ಯರ್ಥಿ ವಿನಯ್ ಅವರ ಬಂಡಲ್‌ನಲ್ಲಿ ಇದ್ದಿದ್ದು ಅಚ್ಚರಿ ಮೂಡಿಸಿತು.

ಅದನ್ನು ಗಮನಿಸಿದ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ಹೀಗೆ ಚುನಾವಣೆ ನಡೆಸಿದರೆ ಹೇಗೆ? ಯಾರದೋ ಮತದ ಚೀಟಿ ಇನ್ಯಾರದೋ ಬಂಡಲ್‌ನಲ್ಲಿ ಬರುತ್ತದೆ ಎಂದರೆ ಹೇಗೆ? ಇಷ್ಟು ತರಾತುರಿಯಲ್ಲೇಕೆ ಎಣಿಕೆ ನಡೆಸುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು‌ ಸಿಟ್ಟು ಪ್ರದರ್ಶಿಸಿದರು.
ಪರಿಶೀಲಿಸಿದ ಚುನಾವಣಾ ಅಧಿಕಾರಿ ಜಿ.ಸಿ. ಪ್ರಕಾಶ್, ಎಣಿಕೆ ವೇಳೆ ಸಿಬ್ಬಂದಿಯೂ ಗಮನಿಸಿಲ್ಲ; ಎಣಿಕೆ ಏಜೆಂಟರೂ ಪ್ರಶ್ನಿಸಿಲ್ಲ. ಆದ್ದರಿಂದ ಈಗ ಆ ಮತವನ್ನು ತಿರಸ್ಕೃತ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದರು. ನಂತರ ಪ್ರಕ್ರಿಯೆ ಮುಂದುವರಿಯಿತು.

2ನೇ ಪ್ರಾಶಸ್ತ್ಯದ ಮತ ಎಣಿಕೆ ನಡೆದಿದೆ. ಈ ಚುನಾವಣೆಯಲ್ಲಿ 19 ಮಂದಿ ಕಣದಲ್ಲಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈವರೆಗೆ 13 ಅಭ್ಯರ್ಥಿಗಳನ್ನು ಕಣದಿಂದ ಎಲಿಮಿನೇಟ್ ಮಾಡಲಾಗಿದೆ.

ADVERTISEMENT

ಕಾಂಗ್ರೆಸ್ ಅಭ್ಯರ್ಥಿ 33403 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ 26983 ಮತಗಳನ್ನು ಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು 17,399 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಪ್ರಸನ್ನ ಎನ್. ಗೌಡ 6,954 ಮತಗಳನ್ನು ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ವಿನಯ್ 3,703 ಮತಗಳನ್ನು ಪಡೆದಿದ್ದಾರೆ. 6420 ಮತಗಳಿಂದ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಮಧು. ಕೋಟ ಪ್ರಕಾರ ಒಟ್ಟು 46,093 ಮತಗಳನ್ನು ತೆಗೆದುಕೊಂಡ ಅಭ್ಯರ್ಥಿ ಗೆಲ್ಲಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.