ADVERTISEMENT

ವಿಧಾನಪರಿಷತ್ ಚುನಾವಣೆ: ಭದ್ರಕೋಟೆಗಳಲ್ಲೇ ಮುಗ್ಗರಿಸಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 20:38 IST
Last Updated 14 ಡಿಸೆಂಬರ್ 2021, 20:38 IST
ಬೆಂಗಳೂರು ನಗರ ಕ್ಷೇತ್ರ ವಿಧಾನ ಪರಿಷತ್ ಚುವನಾವಣೆ ಜಯಸಿದ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ಮಂಗಳವಾರ ನಗರದ ಮಹಾರಾಣಿ ವಿಜ್ಞಾನ ಕಾಲೇಜಿ ಎದುರು ಕಾರ್ಯಕರ್ತರು ನೃತ್ಯ ಮಾಡಿ ಸಂಭ್ರಮಿಸಿದರು.
ಬೆಂಗಳೂರು ನಗರ ಕ್ಷೇತ್ರ ವಿಧಾನ ಪರಿಷತ್ ಚುವನಾವಣೆ ಜಯಸಿದ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ಮಂಗಳವಾರ ನಗರದ ಮಹಾರಾಣಿ ವಿಜ್ಞಾನ ಕಾಲೇಜಿ ಎದುರು ಕಾರ್ಯಕರ್ತರು ನೃತ್ಯ ಮಾಡಿ ಸಂಭ್ರಮಿಸಿದರು.   

ಬೆಂಗಳೂರು: ವಿಧಾನಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಐದು ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದಿದ್ದರೂ, ತನ್ನ ಭದ್ರಕೋಟೆಗಳಲ್ಲಿ ಪೈಕಿ ಒಂದರಲ್ಲಿ ಸೋತಿದ್ದರೆ, ಕೆಲವು ಕಡೆಗಳಲ್ಲಿ ಗೆಲ್ಲಲು ಪ್ರಯಾಸ ಪಟ್ಟಿದೆ.

ಬೆಳಗಾವಿಯಲ್ಲಿ ಬಿಜೆಪಿ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ತಮ್ಮ ಸೋದರ ಲಖನ್ ಜಾರಕಿಹೊಳಿಯನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದರು. ಇಲ್ಲಿ ಮೇಲ್ಮನೆಯ ಮುಖ್ಯಸಚೇತಕರೂ ಆದ ಮಹಂತೇಶ ಕವಟಗಿಮಠ ಸೋಲು ಕಂಡಿದ್ದಾರೆ. ಇಬ್ಬರು ಪ್ರಭಾವಿ ಶಾಸಕರಿದ್ದರೂ ಲಖನ್‌ ಎರಡನೇ ಸ್ಥಾನಕ್ಕೆ ಸೀಮಿತರಾಗಿದ್ದಾರೆ. ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿ ಮೊದಲ ಪ್ರಾಶಸ್ತ್ಯದ ಮತದಲ್ಲೇ ವಿಜಯ ಸಾಧಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವ, ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಫಲ ಕಂಡಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕರ್ಮಭೂಮಿ, ಶಾಸಕ ಜಗದೀಶ ಶೆಟ್ಟರ್ ಪ್ರತಿನಿಧಿಸುವ ಧಾರವಾಡ ಕ್ಷೇತ್ರದಲ್ಲಿ ಪ್ರದೀಪ ಶೆಟ್ಟರ್‌ ಮತಗಳಿಕೆಯಲ್ಲಿ ಎರಡನೇ ಸ್ಥಾನ ಪಡೆದು, ಗೆಲುವು ಸಾಧಿಸಿದ್ದಾರೆ.

ADVERTISEMENT

ಚಿಕ್ಕಮಗಳೂರಿನಲ್ಲಿ ಎಂ.ಕೆ. ಪ್ರಾಣೇಶ್ ಕೇವಲ 6 ಮತಗಳ ಅಂತರದಿಂದ ಕಷ್ಟಪಟ್ಟು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಭದ್ರನೆಲೆ ಎಂದೇ ಬಿಂಬಿತವಾಗುವ ತುಮಕೂರಿನಲ್ಲಿ ಆ ಪಕ್ಷ ಸೋತಿದೆ. ಮತ ಎಣಿಕೆಯಲ್ಲಿ ಕೊನೆಯವರೆಗೂ ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು–ಚಾಮರಾಜನಗರ ಕ್ಷೇತ್ರದಲ್ಲಿಯೂ ಗೆಲ್ಲಲು ವಿಫಲವಾಗಿದೆ.

ಏಜೆಂಟರಿಗೆ ತೋರಿಸಿದ್ದ 2 ಮತ ತಿರಸ್ಕೃತ
ಬೆಳಗಾವಿ:ಗೌಪ್ಯವಾಗಿ ಮತದಾನ ಮಾಡದ ಕಾರಣ ವಿಧಾನಪರಿಷತ್‌‌ ಚುನಾವಣೆಯ 2 ಮತಗಳನ್ನು,‌ ಎಣಿಕೆ ಪ್ರಕ್ರಿಯೆಗೂ ಮುನ್ನವೇ ತಿರಸ್ಕರಿಸಲಾಯಿತು.

ಈ ಕುರಿತು ಪಕ್ಷಗಳ ಏಜೆಂಟರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದರು.

ಗೋಕಾಕ ತಾಲ್ಲೂಕಿನ ಬಡಿಗವಾಡದ ಮತಗಟ್ಟೆ ಸಂಖ್ಯೆ–250ರಲ್ಲಿ ಇಬ್ಬರು ಗ್ರಾಮಪಂಚಾಯಿತಿ ಸದಸ್ಯರು ಗೋಪ್ಯ ಕಾಪಾಡದೆ ಮತದಾನ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇಬ್ಬರು, ತಾವು ಯಾರಿಗೆ ಮತ ಹಾಕಿದ್ದೇವೆ ಎಂದು ಏಜೆಂಟರಿಗೆ ತೋರಿಸಿದ್ದರು ಅಧಿಕಾರಿಗಳು ತಿಳಿಸಿದ್ದರು.

ಅಲ್ಲಿ ಮರು ಮತದಾನ ನಡೆಸಬೇಕೋ ಅಥವಾ ನಿರ್ದಿಷ್ಟ ಮತಪತ್ರಗಳನ್ನು ತಿರಸ್ಕರಿಸಬೇಕೋ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಯೋಗದ ನಿರ್ದೇಶನವನ್ನು ಕೇಳಿದ್ದರು.

*
ಫಲಿತಾಂಶ ಸಮಾಧಾನ ತಂದಿದೆ.ರಾಜ್ಯದ ಜನರು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ. ಈ ಫಲಿತಾಂಶಪರೋಕ್ಷವಾಗಿ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದೆ.
-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.