ADVERTISEMENT

ಮೂರೂ ಪಕ್ಷಗಳ ಸಭೆ ಇಂದು

29ರಂದು ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 19:31 IST
Last Updated 14 ಜೂನ್ 2020, 19:31 IST
ಮೂರೂ ಪಕ್ಷಗಳ ಸಭೆ
ಮೂರೂ ಪಕ್ಷಗಳ ಸಭೆ   

ಬೆಂಗಳೂರು: ಇದೇ 29 ರಂದು ನಡೆ ಯುವ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೋಮವಾರ ಮಹತ್ವದ ಸಭೆ ನಡೆಸಲಿವೆ.

ಇದೇ 18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ ಆಗಿರು ವುದರಿಂದ ಮೂರೂ ಪಕ್ಷಗಳ ಸಭೆಗಳು ಮಹತ್ವ ಪಡೆದುಕೊಂಡಿವೆ. ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿ 4, ಕಾಂಗ್ರೆಸ್‌ 2 ಮತ್ತು ಜೆಡಿಎಸ್‌ಗೆ 1 ಸ್ಥಾನ ಗೆಲ್ಲಲು ಅವಕಾಶವಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಆಯಾಯ ಪಕ್ಷಗಳ ವರಿಷ್ಠರು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದರೆ, ಜೆಡಿಎಸ್‌ನಲ್ಲಿ ಎಚ್‌.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ನಿರ್ಣಯ ತೆಗೆದುಕೊಳ್ಳಲಿದ್ದಾರೆ.

ಬಿಜೆಪಿಯಲ್ಲಿ ಆಕಾಂಕ್ಷಿಗಳಲ್ಲಿ ಆತಂಕ: ಮೇಲ್ಮನೆ ಮೆಟ್ಟಿಲು ಹತ್ತಲು ಬಿಜೆಪಿಯಲ್ಲಿ ಸಾಕಷ್ಟು ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದಾರೆ. ‘ಔಪಚಾರಿಕವಾಗಿ ಸಭೆ ನಡೆಯಲಿದೆ. ಅಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಲ್ಲ ಎಂಬುದು ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲೇ ಸಾಬೀತಾಗಿದೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ADVERTISEMENT

ಪ್ರಮುಖರ ಸಭೆ ನಿರ್ಣಯ ತೆಗೆದುಕೊಂಡು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಕಳುಹಿಸಿದರೂ ವರಿಷ್ಠರುಅದನ್ನು ಒಪ್ಪುವ ಸಾಧ್ಯತೆ ಕಡಿಮೆ ಎಂಬುದು ಆಕಾಂಕ್ಷಿಗಳಿಗೆ ಗೊತ್ತಿದೆ. ಆದರೆ, ಪ್ರಯತ್ನ ಬಿಡಬಾರದು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಎಡತಾಕುವುದು ಬಿಟ್ಟಿಲ್ಲ.

ಕಾಂಗ್ರೆಸ್‌ನಲ್ಲಿ ಎರಡು ಸ್ಥಾನಗಳಿಗೆ ಘಟಾನುಘಟಿ ನಾಯಕರೇ ಸಾಲುಗಟ್ಟಿ ನಿಂತಿದ್ದಾರೆ. ಎಲ್ಲವನ್ನು ಅಳೆದು ತೂಗಿ ಪಟ್ಟಿಯನ್ನು ಹೈಕಮಾಂಡ್‌ಗೆ ಕಳಿಸಿ, ಅಲ್ಲಿಂದ ಒಪ್ಪಿಗೆ ಪಡೆದ ಬಳಿಕವೇ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ. ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೈಕಮಾಂಡ್‌ ಅಂತಿಮ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ ಸಭೆ :ತನ್ನ ಪಾಲಿನ ಒಂದು ಸ್ಥಾನಕ್ಕೆ ಆಯ್ಕೆ ಮಾಡಲು ಸೋಮವಾರ ಜೆಡಿಎಸ್‌ ಪಕ್ಷದ ಪ್ರಮುಖರ ಸಭೆ ಕರೆದಿದೆ. ಸಭೆಯಲ್ಲಿ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಈ ಬಾರಿ ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಅವರಿಗೆ ಅವಕಾಶ ನೀಡಬೇಕು ಎಂಬುದು ದೇವೇಗೌಡರ ಅಪೇಕ್ಷೆಯಾಗಿದೆ. ಆದರೆ, ಎಚ್‌.ಡಿ.ಕುಮಾರಸ್ವಾಮಿಯವರ ಆಯ್ಕೆಯೇ ಬೇರೆ. ಕುಮಾರಸ್ವಾಮಿಗೆ ಆಪ್ತರಾಗಿರುವ ಕುಪೇಂದ್ರರೆಡ್ಡಿ, ಕೋನರಡ್ಡಿ ಮತ್ತು ಟಿ.ಎ.ಶರವಣ ಅವರ ಹೆಸರುಗಳೂ ಮುಂಚೂಣಿಯಲ್ಲಿವೆ. ಹೀಗಾಗಿ ನಾಳೆ ನಡೆಯುವ ಸಭೆಯಲ್ಲಿ ಅದೃಷ್ಟ ಯಾರಿಗೆ ಒಲಿಯುತ್ತದೆಯೋ ಕಾದು ನೋಡಬೇಕು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.