ADVERTISEMENT

ವಿಶ್ವನಾಥ್‌ಗೆ ಎಂಎಲ್‌ಸಿ ಸ್ಥಾನ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 20:18 IST
Last Updated 22 ಸೆಪ್ಟೆಂಬರ್ 2020, 20:18 IST
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್   

ಬೆಂಗಳೂರು: ಎಚ್.ವಿಶ್ವನಾಥ್‌ ಅವರನ್ನು ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆನಾಮನಿರ್ದೇಶನ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.

ಸಾಮಾಜಿಕ ಹೋರಾಟಗಾರ ಎಸ್‌.ರುಕ್ಮಾಂಗದ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ವಿಶ್ವನಾಥ್ ಅವರಿಗೂ ನೋಟಿಸ್ ನೀಡಲು ಆದೇಶಿಸಿದೆ.

‘ಕೆ.ಆರ್. ರಮೇಶ್‌ಕುಮಾರ್‌ ಅವರು 17 ಶಾಸಕರನ್ನು ಅನರ್ಹಗೊಳಿಸಿದ ಪ್ರಕರಣವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್, ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರು ಎಂದು ತಿಳಿಸಿತ್ತು. ವಿಶ್ವನಾಥ್ ಅವರು ಹುಣಸೂರು ಕ್ಷೇತ್ರದಲ್ಲಿ ಸೋಲನುಭವಿಸಿದ್ದು,ಸಂವಿಧಾನದ ಪರಿಚ್ಛೇದ 171(5) ಪ್ರಕಾರ ವಿಧಾನ ಪರಿಷತ್‌ ಸದಸ್ಯರಾಗಿ ನಾಮನಿರ್ದೇಶಿತರಾಗಲು ವಿಶ್ವನಾಥ್ ಅನರ್ಹರು’ ಎಂದು ಅರ್ಜಿದಾರರು ತಿಳಿಸಿದ್ದಾರೆ.

ADVERTISEMENT

ವಿಶ್ವನಾಥ್ ಅವರುವಿಧಾನ ಮಂಡಲದ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದು, ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ‘ಈ ವಿಷಯವು ಸಾಂವಿಧಾನಿಕ ನಿಬಂಧನೆಗಳನ್ನು ಒಳಗೊಂಡಿರುವ ಕಾರಣ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ. ಪ್ರತಿವಾದಿಗಳ ಹೇಳಿಕೆ ಪರಿಶೀಲಿಸಲಾಗುವುದು’ ಪೀಠ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.