ADVERTISEMENT

ಸಚಿವನ ಮಗನಿಂದ ಅಪಘಾತ ಆರೋಪ| ಅಳಿಯನ ಕೊಂದವರ ಉಪಚಾರಕ್ಕೆ ಮುಂದಾಗಿದ್ದ ಸೋದರತ್ತೆ

ಮರಿಯಮ್ಮನಹಳ್ಳಿ ಅಪಘಾತ ಪ್ರಕರಣ; ಖಾಸಗಿ ಆಸ್ಪತ್ರೆಗೆ ಬಂದಿದ್ದ ಗಾಯಗೊಂಡವರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 16 ಫೆಬ್ರುವರಿ 2020, 11:05 IST
Last Updated 16 ಫೆಬ್ರುವರಿ 2020, 11:05 IST
   

ಹೊಸಪೇಟೆ: ಅತಿ ವೇಗ, ಅಜಾಗರೂಕತೆಯಿಂದ ಕಾರು ಓಡಿಸಿ, ತಾಲ್ಲೂಕಿನ ಮರಿಯಮ್ಮನಹಳ್ಳಿ ತಾಂಡಾದ ಬಾಲಕ ರವಿ ನಾಯ್ಕ ಸಾವಿಗೆ ಕಾರಣರಾದವರಿಗೆ ಮೃತನ ಸೋದರತ್ತೆ ಭಾರತಿಬಾಯಿ ಸ್ಟ್ರೆಚರ್‌ ಕೊಟ್ಟು, ಉಪಚಾರಕ್ಕೆ ಮುಂದಾಗಿದ್ದರು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಮರಿಯಮ್ಮನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಫೆ. 10ರಂದು ಮಧ್ಯಾಹ್ನ 3ಕ್ಕೆ ಅಪಘಾತ ಸಂಭವಿಸಿತ್ತು. ರಸ್ತೆಬದಿಯ ಚಹಾದಂಗಡಿ ಬಳಿ ನಿಂತಿದ್ದ ರವಿ ನಾಯ್ಕಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಕಾರಿನಲ್ಲಿದ್ದ ಸಚಿನ್‌ ಗಂಭೀರವಾಗಿ ಗಾಯಗೊಂಡಿದ್ದರು. ಕಾರಿನ ಚಾಲಕ ರಾಹುಲ್‌, ರಾಕೇಶ್‌, ಶಿವಕುಮಾರ ಹಾಗೂ ವರುಣ್‌ಗೆ ಸಣ್ಣ ಗಾಯಗಳಾಗಿದ್ದವು.

ಗಾಯಗೊಂಡವರೆಲ್ಲರೂ ಘಟನಾ ಸ್ಥಳದಿಂದ ನೇರವಾಗಿ ನಗರದ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಮೂರ್ನಾಲ್ಕು ಜನ ಒಳಗೆ ಬಂದು ವಿಷಯ ತಿಳಿಸುತ್ತಲೇ, ಭಾರತಿಬಾಯಿ ಸ್ಟ್ರೆಚರ್‌ ತೆಗೆದುಕೊಂಡು, ಗಾಯಾಳುಗಳನ್ನು ಒಳಗೆ ಕೊಂಡೊಯ್ಯಲು ಮುಂದಾಗುತ್ತಾರೆ. ಆದರೆ, ಸಚಿನ್‌ ಗಂಭೀರವಾಗಿ ಗಾಯಗೊಂಡಿರುವ ವಿಷಯವನ್ನು ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ತಿಳಿಸಿದಾಗ, ‘ಇದು ಅಪಘಾತ ಪ್ರಕರಣ. ಹಾಗಾಗಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವಂತೆ’ ತಿಳಿಸುತ್ತಾರೆ. ಆಗ ಭಾರತಿಬಾಯಿ ಖಾಲಿ ಸ್ಟ್ರೆಚರ್‌ ವಾಪಸ್‌ ತೆಗೆದುಕೊಂಡು ಬರುತ್ತಾರೆ.

ADVERTISEMENT

ಇದಾದ ಕೆಲಹೊತ್ತಿನ ಬಳಿಕ ಭಾರತಿಬಾಯಿ ಅವರಿಗೆ ಸಂಬಂಧಿಕರ ಕಡೆಯಿಂದ ಕರೆ ಬರುತ್ತದೆ. ಊರಿಗೆ ಹೋಗಿ ಘಟನೆ ಬಗ್ಗೆ ತಿಳಿದುಕೊಂಡಾಗ, ‘ಡಿಕ್ಕಿ ಹೊಡೆದವರಿಗೆ ನಾನೇ ಉಪಚಾರ ಮಾಡಲು ಮುಂದಾಗಿದ್ದೆ’ ಎಂದು ನೆನೆದು ಭಾರತಿ ಕಣ್ಣೀರು ಹಾಕಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಚಿನ್‌ ಸಾವನ್ನಪ್ಪಿದ್ದಾರೆ.

ಕಂದಾಯ ಸಚಿವ ಆರ್‌. ಅಶೋಕ್‌ ಅವರ ಮಗ ಶರತ್‌ ಅವರೇ ಕಾರು ಓಡಿಸುತ್ತಿದ್ದರು. ಅಪಘಾತದ ನಂತರ ಅವರನ್ನು ಬೇರೊಂದು ವಾಹನದಲ್ಲಿ ಪೊಲೀಸರೇ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಿಸಿಟಿವಿಯಲ್ಲಿ ಅಸ್ಪಷ್ಟ ದೃಶ್ಯ

ಗಾಯಗೊಂಡವರು ಖಾಸಗಿ ಆಸ್ಪತ್ರೆಗೆ ಬಂದಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಅದು ಅಸ್ಪಷ್ಟವಾಗಿದೆ. ಪ್ರಭಾವಿ ಸಚಿವರ ಮಗ ಕೂಡ ಗಾಯಾಳುಗಳ ಜತೆಗೆ ಆಸ್ಪತ್ರೆಗೆ ಬಂದಿದ್ದ ಎಂಬ ಮಾತು ಕೇಳಿ ಬಂದಿದೆ. ಆದರೆ, ಅದು ಇನ್ನಷ್ಟೇ ದೃಢಪಡಬೇಕಿದೆ. ಇನ್ನೊಂದು ಮೂಲಗಳ ಪ್ರಕಾರ, ಅಪಘಾತ ಸಂಭವಿಸಿದ ನಂತರ ಘಟನಾ ಸ್ಥಳದಿಂದ ಸಚಿವರ ಮಗನನ್ನು ಬೇರೆಡೆ ಕಳುಹಿಸಲಾಗಿತ್ತು ಎನ್ನಲಾಗಿದೆ.

ಭಾರತಿಬಾಯಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಗಾಯಗೊಂಡು ಆಸ್ಪತ್ರೆಗೆ ಬಂದ ಎಲ್ಲರನ್ನೂ ನಾನು ಗುರುತಿಸುತ್ತೇನೆ. ಅವರಲ್ಲಿ ಸಚಿವರ ಮಗ ಕೂಡ ಇದ್ದ. ಅವರನ್ನು ನನ್ನ ಮುಂದೆ ತಂದು ನಿಲ್ಲಿಸಿದರೆ ಗುರುತಿಸುವೆ. ಬಡವರ ಮೇಲೆ ದೌರ್ಜನ್ಯ ನಡೆಸಿ, ಪರಾರಿಯಾಗಿರುವುದು ಎಷ್ಟು ಸರಿ. ನಮಗೆ ನ್ಯಾಯ ಕೊಡಿಸಬೇಕು’ ಎಂದು ಭಾರತಿಬಾಯಿ ಆಗ್ರಹಿಸಿದ್ದಾರೆ.

ನ್ಯಾಯಾಲಯಕ್ಕೆ ಹಾಜರು

ಅಪಘಾತಕ್ಕೆ ಕಾರಣನಾದ ಕಾರು ಚಾಲಕ ರಾಹುಲ್‌ ಎಂಬಾತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.ಬಳಿಕ ಆತನನ್ನು ಬೆಂಗಳೂರಿನಿಂದ ಅಪಘಾತ ನಡೆದ ಸ್ಥಳಕ್ಕೆ ಕರೆತಂದು ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನು ಸಿಕ್ಕಿದೆ ಎಂದು ಗೊತ್ತಾಗಿದೆ.

ಈ ಕುರಿತು ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಘಟನೆಯ ತನಿಖಾಧಿಕಾರಿ ಸಿಪಿಐ ಎಚ್‌. ಶೇಖರಪ್ಪ ಅವರನ್ನು ಹಲವು ಸಲ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.