ADVERTISEMENT

ಹಳ್ಳಿಗಳಿಗೆ ಇನ್ನು ‘ಮೊಬೈಲ್‌ ಕ್ಲಿನಿಕ್‌’

ವೈದ್ಯರ ನಡೆ ಹಳ್ಳಿಯ ಕಡೆ

​ಪ್ರಜಾವಾಣಿ ವಾರ್ತೆ
Published 23 ಮೇ 2021, 20:27 IST
Last Updated 23 ಮೇ 2021, 20:27 IST
   

ಬೆಂಗಳೂರು: ಗ್ರಾಮೀಣ ಪ್ರದೇಶ ಗಳಲ್ಲಿ ಕೋವಿಡ್‌ ನಿಯಂತ್ರಿಸುವ ಉದ್ದೇಶದಿಂದ ಪ್ರತಿಯೊಬ್ಬರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಅನುಕೂಲ ಆಗುವಂತೆ ‘ವೈದ್ಯರ ನಡೆ ಹಳ್ಳಿಯ ಕಡೆ’ (ಮೊಬೈಲ್‌ ಕ್ಲಿನಿಕ್‌) ಕಾರ್ಯಕ್ರಮ ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗಿದ್ದು, ವೈದ್ಯರ ತಂಡದ ಜೊತೆ ತರಬೇತಿ ಅವಧಿಯಲ್ಲಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನೂ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮ ಆರಂಭಿಸುವುದಕ್ಕೂ ಎರಡು ದಿನ ಮೊದಲು ಗ್ರಾಮ ಪಂಚಾಯಿತಿಗಳು ಜನರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ಮೊಬೈಲ್‌ ಕ್ಲಿನಿಕ್‌ ತಂಡ ಒಂದು ವಾರದಲ್ಲಿ ತಾಲ್ಲೂಕಿನಲ್ಲಿರುವ ಎಲ್ಲ ಗ್ರಾಮಗಳಿಗೆ ಭೇಟಿ ನೀಡಬೇಕು. ಪ್ರತಿ ದಿನ 3 ರಿಂದ 4 ಹಳ್ಳಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಸೋಂಕಿನ ಲಕ್ಷಣ ಇದ್ದವರಿಗೆ ಈ ತಂಡ ಆರ್‌ಎಟಿ ಪರೀಕ್ಷೆ ನಡೆಸಲಿದೆ. ಸೋಂಕು ದೃಢಪಟ್ಟರೆ, ಟ್ರಯಾಜಿಂಗ್‌ ಮಾಡಬೇಕು. ರೋಗಲಕ್ಷಣದ ಆಧಾರದಲ್ಲಿ ಕೋವಿಡ್‌ ಆರೈಕೆ ಕೇಂದ್ರಕ್ಕೆ ಸೇರಿಸಬೇಕೇ ಅಥವಾ ಆಸ್ಪತ್ರೆಗೆ ದಾಖಲಿಸಬೇಕೇ ಎಂದು ವೈದ್ಯರು ತೀರ್ಮಾನ ತೆಗೆದುಕೊಂಡು, ವೈದ್ಯಕೀಯ ಕಿಟ್‌ ನೀಡಬೇಕು. ಸೋಂಕು ದೃಢಪಟ್ಟವರ ಸಂಪರ್ಕದಲ್ಲಿ ಇದ್ದವರನ್ನೂ ತಪಾಸಣೆಗೆ ಒಳಪಡಿಸಬೇಕು. ರೋಗಲಕ್ಷಣಗಳಿದ್ದು ಆರ್‌ಎಟಿ ವರದಿ ನೆಗೆಟಿವ್‌ ಬಂದರೆ, ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೆ, ಕನಿಷ್ಠ ವೈದ್ಯಕೀಯ ಚಿಕಿತ್ಸೆ ಆರಂಭಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ADVERTISEMENT

ಈ ತಂಡ ನಿತ್ಯದ ವರದಿಯನ್ನು ಆಯಾ ತಾಲ್ಲೂಕು ಆರೋಗ್ಯ ಅಧಿಕಾರಿಗೆ ನೀಡಬೇಕು. ತಂಡಕ್ಕೆ ಪಿಪಿಇ ಕಿಟ್‌ ಸೇರಿದಂತೆ ಎಲ್ಲ ವೈದ್ಯಕೀಯ ಪರಿಕರಗಳನ್ನು ಒದಗಿಸಲಾಗುವುದು. ಸ್ಥಳೀಯ ಆಶಾ ಕಾರ್ಯಕರ್ತೆಯರು ಎನ್‌ 95 ಮಾಸ್ಕ್‌ ಮತ್ತು ಪಿಪಿಇ ಕಿಟ್‌ ಧರಿಸಿ ಮನೆ ಮನೆಗಳಿಗೆ ಭೇಟಿ ನೀಡಿ ಸೋಂಕು ಲಕ್ಷಣ ಇರುವವರನ್ನು ಈ ತಂಡಕ್ಕೆ ಶಿಫಾರಸು ಮಾಡಬೇಕು. ಸೋಂಕಿತರನ್ನು ಕರೆದೊಯ್ಯಲು ಆಂಬುಲೆನ್ಸ್ ಅಥವಾ ಅದೇ ಮಾದರಿಯ ವಾಹನವನ್ನು ಸಿದ್ಧಪಡಿಸಿಕೊಳ್ಳಬೇಕು. ಮೊಬೈಲ್‌ ಕ್ಲಿನಿಕ್‌ನ ಸಿಬ್ಬಂದಿ ಗ್ರಾಮಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆಯ ಸಮನ್ವಯದಲ್ಲಿ ಕೆಲಸ ಮಾಡಬೇಕು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.