ADVERTISEMENT

ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವ ವಿಚಾರ ಚರ್ಚೆಯಲ್ಲಿದೆ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 10:10 IST
Last Updated 23 ಫೆಬ್ರುವರಿ 2026, 10:10 IST
   

ಬೆಂಗಳೂರು: ‘ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವ ವಿಚಾರ ಚರ್ಚೆಯಲ್ಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಬಗ್ಗೆ ಪೋಷಕರಿಂದಲೂ ಒತ್ತಡವಿದೆ. ಅನೇಕ ದೇಶಗಳಲ್ಲಿ ಈಗಾಗಲೇ ಈ ಕ್ರಮ ಕೈಗೊಳ್ಳಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಈ ವಿಷಯ ಚರ್ಚೆಯಾಗುತ್ತಿದೆ’ ಎಂದರು.

ಶಾಲೆಗಳಲ್ಲಿ ಮಕ್ಕಳು ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ವಿಚಾರವಾಗಿ ಕೇಳಿದಾಗ, ‘ನಮ್ಮ ಶಾಲೆಗಳಲ್ಲಿ ಮೊಬೈಲ್ ನಿಷೇಧ ಮಾಡಿದ್ದೇವೆ. ಯಾವ ರೀತಿ ಮೊಬೈಲ್ ಬಳಕೆ ದುರುಪಯೋಗವಾಗುತ್ತಿದೆ ಎಂದು ಬಹಿರಂಗಗೊಳಿಸಲು ಆಗುವುದಿಲ್ಲ. ಅದಕ್ಕೆ ಈ ವಿಚಾರವಾಗಿ ಚರ್ಚೆ ನಡೆಸಲಾಗುತ್ತಿದೆ’ ಎಂದರು.

ADVERTISEMENT

ಸಚಿವ ಎಚ್‌.ಸಿ. ಮಹದೇವಪ್ಪ ಅವರು ದಲಿತ ಮುಖ್ಯಮಂತ್ರಿ ವಿಚಾರ ಮಂಡಿಸಿರುವ ಬಗ್ಗೆ ಕೇಳಿದಾಗ, ‘ಅವರು ನಮ್ಮ ರಾಷ್ಟ್ರೀಯ ನಾಯಕರು. ಅವರಿಗೆ ಇಲ್ಲಿಂದಲೇ ನಮಸ್ಕಾರ’ ಎಂದರು.

ಕೆರೆಗಳು ಇರುವುದು ಅಂತರ್ಜಲ ಹೆಚ್ಚಳ ಮಾಡಲು:

ರಾಷ್ಟ್ರೀಯ ನೀರು ಗುಣಮಟ್ಟ ಪ್ರಮಾಣಿತ ಸಂಸ್ಥೆಯು ಬೆಂಗಳೂರು ಕೆರೆಗಳ ನೀರು ಕುಡಿಯಲು ಅರ್ಹವಲ್ಲ ಎಂದು ನೀಡಿರುವ ವರದಿ ಬಗ್ಗೆ ಕೇಳಿದಾಗ, ‘ಬೆಂಗಳೂರಿನ ಕೆರೆ ನೀರನ್ನು ಕುಡಿಯಲು ಹಾಗೂ ಸ್ನಾನಕ್ಕೆ ಬಳಸಿ ಎಂದು ಸರ್ಕಾರ ಹೇಳಿಲ್ಲ. ಈ ಕೆರೆಗಳು ಇರುವುದು ಅಂತರ್ಜಲ ಹೆಚ್ಚಳ ಮಾಡಲು. ತಿಪ್ಪಗೊಂಡನಹಳ್ಳಿ ಕೆರೆ ನೀರನ್ನು ಜಲ ಮಂಡಳಿಯಿಂದ ಶುದ್ಧಿ ಮಾಡಲಾಗುತ್ತಿದೆ. ಬೆಂಗಳೂರಿನ ಕೆರೆಗಳ ನೀರು ಕುಡಿಯಲು, ಸ್ನಾನ‌ ಮಾಡಲು ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ವಿಬಿ ಜಿ ರಾಮ್ ಜಿ’ ಕಾಯ್ದೆ ವಿಚಾರವಾಗಿ ಕೇಳಿದಾಗ, ‘ಈ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಯಾವುದೇ ನಿರ್ದೇಶನವನ್ನೂ ನೀಡಿಲ್ಲ. ಈ ಹಿಂದೆ ಕೂಲಿ ಮಾಡಿದವರಿಗೂ ಹಣ ಬಿಡುಗಡೆ ಮಾಡಿಲ್ಲ. ಕಾಯ್ದೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಕೂಲಿ ಕಾರ್ಮಿಕರು, ಬಡವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇದರ ವಿರುದ್ಧ ದೊಡ್ಡ ಹೋರಾಟ ನಡೆಸುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.