ಬೆಂಗಳೂರು: ‘ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ವಿನಾ ಕಾರಣ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ರಾಜ್ಯಸಭೆ ಸದಸ್ಯ ಸ್ಥಾನ ಪಡೆಯುವುದಕ್ಕಾಗಿ ಅವರು ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೋಹನ್ ದಾಸ್ ಪೈ ಅವರು ಕೇಂದ್ರದಲ್ಲಿ ಉನ್ನತ ಹುದ್ದೆ ಬಯಸಿರಬಹುದು. ಅದಕ್ಕೆ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದರು.
‘ಹಿಂದೆ ಅವರು ಬೇರೆ ಬೇರೆ ಹುದ್ದೆಯಲ್ಲಿ ಇದ್ದವರು. ಸರ್ಕಾರ ಬದಲಾವಣೆಯಾದ ಮೇಲೆ ಅವರ ವರಸೆ ಬದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾನು ಗುರಿ ಆಗಿದ್ದೇವೆ. ಏನೋ ಒಂದು ಆಗಬೇಕಿದೆ. ಅದಕ್ಕೆ ಸೋಷಿಯಲ್ ಮಿಡಿಯಾ ವಾರಿಯರ್ ಆಗಿದ್ದಾರೆ. ಹಿಂದೆ ತಿಂಗಳಿಗೆ ಒಮ್ಮೆ ಮಾತನಾಡುತ್ತಿದ್ದರು. ಈಗ ವಾರಕ್ಕೊಮ್ಮೆ ಮಾತನಾಡುತ್ತಿದ್ದಾರೆ’ ಎಂದರು.
‘ಮೇಲಿರುವ ಭಗವಂತ ಕೆಳಗೆ ಬಂದರೂ ಬೆಂಗಳೂರನ್ನು ಕೇವಲ ಎರಡು-ಮೂರು ವರ್ಷಗಳಲ್ಲಿ ಬದಲಾಯಿಸಲು ಆಗುವುದಿಲ್ಲ’ ಎಂದು ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದರು. ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಮೋಹನ್‌ದಾಸ್ ಪೈ, ‘ಡಿ.ಕೆ.ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾಗಿ ಬಂದು ಎರಡು ವರ್ಷ ಆಯಿತು. ನಗರಕ್ಕೆ ಪ್ರಬಲ ಸಚಿವರು ಸಿಕ್ಕಿದ್ದಾರೆಂದು ನಾವೆಲ್ಲಾ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದೆವು. ಆದರೆ, ನಮ್ಮ ಜೀವನ ಇನ್ನಷ್ಟು ಕೆಟ್ಟದಾಗಿದೆ. ಯಾವುದನ್ನೂ ಸಮಯಕ್ಕೆ ಸರಿಯಾಗಿ ಜಾರಿ ಮಾಡಿಲ್ಲ’ ಎಂದು ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.