
Mohandas Pai Tax terrorisim
ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ’ ಎಂದು ಉದ್ಯಮಿ ಟಿ.ವಿ.ಮೋಹನ್‌ದಾಸ್ ಪೈ ಅವರು ಕೋರಿದ್ದಾರೆ.
ಶನಿವಾರ ಮಧ್ಯಾಹ್ನ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅದನ್ನು ಟ್ಯಾಗ್ ಮಾಡಿದ್ದಾರೆ.
‘ತೆರಿಗೆ ಭಯೋತ್ಪಾದನೆಗೆ ನಾವು ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರನ್ನು ಕಳೆದುಕೊಂಡೆವು. ತೆರಿಗೆ ಅಧಿಕಾರಿಗಳ ದಾಳಿಗೆ ಬಹಳಷ್ಟು ಜನರು ಹೆದರಿಹೋಗಿದ್ದಾರೆ. ನಾಗರಿಕರ ಹಕ್ಕುಗಳ ಮೇಲಿನ ದಾಳಿ ಇದು. ದೇಶವನ್ನು ನಡೆಸಬೇಕಾದ ರೀತಿ ಇದಲ್ಲ. ನಿರ್ಮಲಾ ಸೀತಾರಾಮನ್ ಅವರೇ, ಈ ಬಗ್ಗೆ ಅತ್ಯಂತ ಪಾರದರ್ಶಕ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದ್ದಾರೆ.
‘ಪ್ರಾಮಾಣಿಕ ತೆರಿಗೆ ಪಾವತಿದಾರರ ಮೇಲೆ ತೆರಿಗೆ ಅಧಿಕಾರಿಗಳು ನಡೆಸುವ ದಾಳಿ ಅತ್ಯಂತ ಭೀಕರವಾಗಿರುತ್ತದೆ. ನಮ್ಮ ಹಣಕಾಸು ಸಚಿವರು, ಅಂತಹ ಅಧಿಕಾರಿಗಳ ಅಧಿಕಾರವನ್ನು ಹೆಚ್ಚಿಸುತ್ತಲೇ ಇದ್ದಾರೆ. ಆದರೆ ತೆರಿಗೆ ಪಾವತಿದಾರರನ್ನು ರಕ್ಷಿಸುವುದು ಯಾರು? ತಪ್ಪಾಗಿ ದಾಳಿ ನಡೆಸಿದ ಅಧಿಕಾರಿಗಳನ್ನು ಶಿಕ್ಷಿಸುವುದು ಯಾರು? ಪ್ರಧಾನಿ ಸರ್, ಇಂತಹ ತೆರಿಗೆ ಅಧಿಕಾರಿಗಳಿಂದ ನಮ್ಮನ್ನು ರಕ್ಷಿಸಿ’ ಎಂದು ಪೈ ಕೋರಿದ್ದಾರೆ.
‘ಮೂರು ವರ್ಷಗಳಲ್ಲಿ ನೇರ ತೆರಿಗೆ ಮೂಲಕ ₹72 ಲಕ್ಷ ಕೋಟಿ ಸಂಗ್ರಹಿಸಲಾಗಿದೆಯೇ? ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ಎಷ್ಟು ಕೋಟಿ ಸಂಗ್ರಹಿಸಲಾಗಿದೆ? ನ್ಯಾಯಾಲಯಗಳ ವ್ಯಾಜ್ಯಗಳಲ್ಲಿ ಎಷ್ಟು ಹಣ ಸಿಲುಕಿಕೊಂಡಿದೆ ಎಂಬುದರ ಕುರಿತಾದ ಸಂಪೂರ್ಣ ದತ್ತಾಂಶವನ್ನು ನಿರ್ಮಲಾ ಸೀತಾರಾಮನ್ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.