ADVERTISEMENT

ಸಾಂಸ್ಕೃತಿಕ ಸಂಘಟನೆಗಳಿಗೆ ಧನ ಸಹಾಯ

ಸ್ಥಗಿತವಾಗಿದ್ದ ಯೋಜನೆಗೆ ಮರುಜೀವ ನೀಡಿದ ಸರ್ಕಾರ * ₹ 17 ಕೋಟಿ ಅನುದಾನ ಮೀಸಲು

ವರುಣ ಹೆಗಡೆ
Published 29 ಸೆಪ್ಟೆಂಬರ್ 2020, 20:47 IST
Last Updated 29 ಸೆಪ್ಟೆಂಬರ್ 2020, 20:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ನಿಂದಾಗಿ ಈ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪೂರ್ಣ ಸ್ತಬ್ಧವಾಗಿದ್ದು, ಸಂಘ–ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಕಲಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿರುವ ಸರ್ಕಾರ, ಸ್ಥಗಿತವಾಗಿದ್ದ ಧನಸಹಾಯ ಯೋಜನೆಗೆ ಮರುಜೀವ ನೀಡಿದೆ.

ಸರ್ಕಾರವು ನೀಡುವ ಅನುದಾನವನ್ನೇ ನಂಬಿಕೊಂಡು ಸಾವಿರಾರು ಸಂಘ–ಸಂಸ್ಥೆಗಳು ಕೆಲಸ ಮಾಡುತ್ತಿವೆ. ಕಲೆಯನ್ನೇ ನಂಬಿಕೊಂಡವರಿಗೆ ವರ್ಷದ ಬಹುತೇಕ ದಿನ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಸಹಕಾರಿಯಾಗಿದೆ. 2018-19ನೇ ಸಾಲಿನಲ್ಲಿ ಧನಸಹಾಯಕ್ಕೆ ತಜ್ಞರು ಅಂತಿಮ ಮಾಡಿದ ಪಟ್ಟಿಯಲ್ಲಿ ಕೆಲ ಸಂಘ–ಸಂಸ್ಥೆಗಳು ನಕಲಿ ಬಿಲ್‌ಗಳನ್ನು ಸಲ್ಲಿಕೆ ಮಾಡಿವೆ ಎಂಬ ಆರೋಪ ಎದುರಾಗಿತ್ತು. ಈ ಕಾರಣಕ್ಕೆ ಧನಸಹಾಯ ಪ್ರಕ್ರಿಯೆ ತಡೆಹಿಡಿದಿದ್ದ ಹಿಂದಿನ ಮೈತ್ರಿ ಸರ್ಕಾರ, ಈ ಯೋಜನೆ ಸ್ಥಗಿತ ಮಾಡಿ, ಕರ್ನಾಟಕ ವೈಭವ ಯೋಜನೆ ರೂಪಿಸಿತ್ತು.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಯೋಜನೆಯ 2018–19ನೇ ಸಾಲಿನ ₹11.60 ಕೋಟಿ ಅನುದಾನವನ್ನು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಡಿ ಸರ್ಕಾರ ಪ್ರತ್ಯೇಕವಾಗಿ ಇರಿಸಿ,ಸಂಘ–ಸಂಸ್ಥೆಗಳಿಗೆ ಹಂಚಿಕೆ ಮಾಡಿತ್ತು. ಕಳೆದ ಸಾಲಿನಲ್ಲಿ ಈ ಯೋಜನೆಗೆ ಅನುದಾನವನ್ನು ಸರ್ಕಾರ ಮೀಸಲಿಡಲಿಲ್ಲ. ಇದರಿಂದಾಗಿ ಕೆಲ ಸಂಘ–ಸಂಸ್ಥೆಗಳು ಸಾಂಸ್ಕೃತಿಕ ಚಟುವಟಿಕೆಯಿಂದ ದೂರವಾಗಿದ್ದವು. ಈ ನಡುವೆ ಹಲವು ಸಂಘ–ಸಂಸ್ಥೆಗಳು ಯೋಜನೆಯನ್ನು ಪುನಃ ಆರಂಭಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

ADVERTISEMENT

₹ 17 ಕೋಟಿ ಅನುದಾನ: 2020–21ನೇ ಸಾಲಿನಲ್ಲಿ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಅನುದಾನ ನೀಡಲು ಸರ್ಕಾರವು ಒಟ್ಟು ₹ 17 ಕೋಟಿ ಅನುದಾನ ಮೀಸಲಿಟ್ಟಿದೆ. ಇದರಲ್ಲಿ ₹ 10 ಕೋಟಿ ಸಾಮಾನ್ಯ ವರ್ಗದ ಸಂಘ–ಸಂಸ್ಥೆಗಳಿಗೆ, ₹ 7 ಕೋಟಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಂಘ–ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ.

‘2018–19ನೇ ಸಾಲಿನ ಧನಸಹಾಯ ಪ್ರಕ್ರಿಯೆ ಹಲವು ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು. ಆ ವೇಳೆ ₹ 2 ಲಕ್ಷಕ್ಕಿಂತ ಮೇಲ್ಪಟ್ಟು ಅನುದಾನ ಪಡೆಯುವ ಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಯನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ಬಾರಿ ಆಯ್ಕೆ ಪ್ರಕ್ರಿಯೆಯಲ್ಲಿನ ಗೊಂದಲ ನಿವಾರಣೆಗೆ ನಿಯಮದಲ್ಲಿ ಕೆಲ ಮಾರ್ಪಾಡು ಮಾಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಆಯ್ಕೆ ಪ್ರಕ್ರಿಯೆ ಸರಳೀಕರಣಕ್ಕೆ ಚಿಂತನೆ

ಧನಸಹಾಯದ ನಿಯಮದ ಪ್ರಕಾರ ಸಂಘ–ಸಂಸ್ಥೆಗಳು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆಯಾ ಜಿಲ್ಲೆಯ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ದಾಖಲೆ ಪರಿಶೀಲಿಸಿ, ಸಂಘ–ಸಂಸ್ಥೆಗಳ ಪಟ್ಟಿಯನ್ನು ಸಂಸ್ಕೃತಿ ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಬೇಕು.

ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅಕಾಡೆಮಿ ಅಧ್ಯಕ್ಷರನ್ನು ಒಳಗೊಂಡ ತಜ್ಞರ ಸಮಿತಿ ಧನಸಹಾಯಕ್ಕೆ ಪಟ್ಟಿಯನ್ನು ಅಂತಿಮಗೊಳಿಸಲಿದೆ. ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರು ಮಗದೊಮ್ಮೆ ಪರಿಶೀಲಿಸಿ, ಸಚಿವರಿಗೆ ಕಡತ ರವಾನಿಸಲಿದ್ದಾರೆ. ಆದರೆ, ಪ್ರಸಕ್ತ ಸಾಲಿನಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಯನ್ನು ಪರಿಶೀಲನೆ ನಡೆಸಿ, ಅವರ ಮೂಲಕವೇ ಅನುದಾನ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಂಘ–ಸಂಸ್ಥೆಗಳಿಗೆ ಧನ ಸಹಾಯ ನೀಡುವ ಯೋಜನೆಯನ್ನು ಪುನಃ ಪ್ರಾರಂಭಿಸಲಾಗಿದೆ. ಯಾವ ರೀತಿ ಆಯ್ಕೆ ಮಾಡಬೇಕೆನ್ನುವುದು ಚರ್ಚೆಯಲ್ಲಿದೆ. ಅಕ್ಟೋಬರ್ ತಿಂಗಳಲ್ಲಿ ಅರ್ಜಿ ಆಹ್ವಾನಿಸುತ್ತೇವೆ ಎಂದುಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.