ADVERTISEMENT

ರಾಜ್ಯದ ವಿವಿಧೆಡೆ ಉತ್ತಮ ಮಳೆ: ಕರಾವಳಿಯಲ್ಲಿ 26ರವರೆಗೆ ಭಾರಿ ಮಳೆ ಮುನ್ಸೂಚನೆ

ಕರಾವಳಿಯಲ್ಲಿ 26ರವರೆಗೆ ಭಾರಿ ಮಳೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 18:56 IST
Last Updated 22 ಜೂನ್ 2022, 18:56 IST
   

ಕಾರವಾರ/ಬೆಳಗಾವಿ: ಉತ್ತರ ಕನ್ನಡದ ವಿವಿಧೆಡೆ ಬುಧವಾರವೂ ಉತ್ತಮ ಮಳೆಯಾಯಿತು.

ಭಟ್ಕಳ, ಹೊನ್ನಾವರ, ಸಿದ್ದಾಪುರ, ಹಳಿಯಾಳ, ಮುಂಡಗೋಡ ತಾಲ್ಲೂಕುಗಳಲ್ಲಿ ದಿನವಿಡೀ ಆಗಾಗ ರಭಸದ ವರ್ಷಧಾರೆಯಾಯಿತು. ಕಾರವಾರ, ಅಂಕೋಲಾ, ಕುಮಟಾ, ಶಿರಸಿ ತಾಲ್ಲೂಕುಗಳಲ್ಲಿ ಒಂದೆರಡು ಸಲ ಸಾಧಾರಣ ಮಳೆಯಾಯಿತು. ದಿನವಿಡೀ ದಟ್ಟವಾದ ಮೋಡ ಕವಿದಿದ್ದು, ಕಾರವಾರದಲ್ಲಿ ಮೋಡದ ಮರೆಯಿಂದ ಆಗಾಗ ಬಿಸಿಲು ಇಣುಕಿತು. 24 ಗಂಟೆಗಳ ಅವಧಿಯಲ್ಲಿ ಭಟ್ಕಳ, ಕುಮಟಾ ಮತ್ತು ಹಳಿಯಾಳದಲ್ಲಿ ತಲಾ ಒಂದು ಮನೆ ಭಾಗಶಃ ಹಾನಿಗೀಡಾಗಿದೆ.

ಕರಾವಳಿಯಲ್ಲಿ ಜೂನ್ 26ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಮೀನುಗಾರರು, ಪ್ರವಾಸಿಗರು ಸಮುದ್ರಕ್ಕೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ADVERTISEMENT

ಹುಬ್ಬಳ್ಳಿ ಹಾಗೂ ಸುತ್ತಮುತ್ತ ಕೆಲ ಸಮಯ ಜಿಟಿಜಿಟಿ ಮಳೆಯಾಯಿತು. ಬೆಳಗಾವಿ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.

ಗೋಣಿಕೊಪ್ಪಲು (ಕೊಡಗು): ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆ ಸುರಿಯಿತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತುಂತುರು ಮಳೆ ಬಿತ್ತು. ಸಂಜೆ 4 ಗಂಟೆಗೆ ಜೋರು ಮಳೆ ಸುರಿದಿದ್ದರಿಂದ ರಸ್ತೆಗಳಲ್ಲಿ ನೀರು ಹರಿಯಿತು. ವಿದ್ಯಾರ್ಥಿಗಳು ಮನೆಗಳಿಗೆ ತೆರಳಲು ತೊಂದರೆ ಉಂಟಾಯಿತು. ಪೊನ್ನಂಪೇಟೆ, ಹುದಿಕೇರಿ, ಬಿ.ಶೆಟ್ಟಿಗೇರಿ, ಹಾತೂರು, ಅರುವತ್ತೊಕ್ಕಲು ಭಾಗದಲ್ಲೂ ಮಳೆಯಾಗಿದೆ. ರೈತರು ಭತ್ತದ ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಮಡಿಕೇರಿ ನಗರದಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ.

ಕರಾವಳಿಯಲ್ಲಿ ಮಳೆ

ಮಂಗಳೂರು: ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಆಗಾಗ ಬಿರುಸಿನ ಮಳೆ ಸುರಿಯಿತು.

ಮಂಗಳೂರು ನಗರದಲ್ಲಿ ಬುಧವಾರ ಮಧ್ಯಾಹ್ನದಿಂದ ಮಳೆ ಕೊಂಚ ತಗ್ಗಿದೆ. ಸಮುದ್ರದಲ್ಲಿ ಗಂಟೆಗೆ 40–50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಿದೆ.

ಗಾಳಿ ಮಳೆಗೆ ಉಡುಪಿ ತಾಲ್ಲೂಕಿನ ಮರ್ಣೆ ಗ್ರಾಮದಲ್ಲಿ ಮನೆಯ ಮಾಡು ಕುಸಿದಿದೆ. ಭಾರಿ ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಮಲ್ಪೆ, ಪಡುಕೆರೆ, ಮಟ್ಟು ಭಾಗಗಳಲ್ಲಿ ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಮಳೆ ಮುಂದುವರಿದರೆ ಕಡಲ್ಕೊರೆತ ಉಂಟಾಗುವ ಭೀತಿ ಇದೆ. ಶಿರೂರಿನಲ್ಲಿ 8.5 ಸೆಂ.ಮೀ ಮಳೆ ಬಿದ್ದಿದೆ.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು, ಮೂಡಿಗೆರೆ, ಕೊಪ್ಪ, ಕಳಸ ಭಾಗದಲ್ಲಿ ಬುಧವಾರ ಬಿರುಸಿನ ಮಳೆಯಾಗಿದೆ. ಆಲ್ದೂರಿನಲ್ಲಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಿರುವ ಜಾಗದಲ್ಲಿ ಮಳೆ ನೀರು ಆವರಿಸಿದೆ. ಕೊಪ್ಪ, ಕಳಸ ಭಾಗದಲ್ಲಿ ಹದ ಮಳೆಯಾಗಿದೆ. ಚಿಕ್ಕಮಗಳೂರು, ತರೀಕೆರೆ, ಎನ್‌.ಆರ್‌.ಪುರ ಸಹಿತ ವಿವಿಧೆಡೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ 19.2 ಮಿ.ಮೀ, ಬಂಟ್ವಾಳದಲ್ಲಿ 35.1 ಮಿ.ಮೀ, ಮಂಗಳೂರಿನಲ್ಲಿ 33.4 ಮಿ.ಮೀ. ಪುತ್ತೂರಿನಲ್ಲಿ 29.2 ಮಿ.ಮೀ, ಸುಳ್ಯದಲ್ಲಿ 29.8 ಮಿ.ಮೀ, ಮೂಡುಬಿದಿರೆಯಲ್ಲಿ 18.2 ಮಿ.ಮೀ ಹಾಗೂ ಕಡಬ ತಾಲ್ಲೂಕಿನಲ್ಲಿ 30.2 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.