ADVERTISEMENT

ಮೂಕ್ಸ್‌: ಮೈಸೂರು ವಿಶ್ವವಿದ್ಯಾಲಯ ದೇಶಕ್ಕೆ ನಂ. 1

‘ಸ್ವಯಂ’ ಯೋಜನೆಯಡಿ ‘ಯುಜಿಸಿ’ ಆರಂಭಿಸಿರುವ ಆನ್‌ಲೈನ್‌ ಕಲಿಕಾ ವೇದಿಕೆ

ನೇಸರ ಕಾಡನಕುಪ್ಪೆ
Published 19 ಜೂನ್ 2019, 19:45 IST
Last Updated 19 ಜೂನ್ 2019, 19:45 IST
ಪ್ರೊ.ಲಿಂಗರಾಜ ಗಾಂಧಿ
ಪ್ರೊ.ಲಿಂಗರಾಜ ಗಾಂಧಿ   

ಮೈಸೂರು: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಆರಂಭಿಸಿರುವ ವಿಶಾಲ ಮುಕ್ತ ಆನ್‌ಲೈನ್ ಕೋರ್ಸ್‌ (ಮೂಕ್ಸ್‌) ಗಳಿಗೆ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅತ್ಯಧಿಕ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ದೇಶದಲ್ಲೇ ಅಗ್ರಸ್ಥಾನ ಲಭಿಸಿದೆ.

ದೇಶದಲ್ಲಿ ಒಟ್ಟು 20 ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ‘ಮೂಕ್ಸ್‌’ ಆರಂಭವಾಗಿದೆ. ಮೈಸೂರು ವಿ.ವಿ.ಯಲ್ಲಿ 796 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಈ ಸಂಖ್ಯೆಯು ದೇಶದಲ್ಲೇ ಅತ್ಯಧಿಕ ಎಂಬ ಹೆಗ್ಗಳಿಕೆ ದೊರೆತಿದೆ.

ಕೆಲವು ಮುಂದುವರಿದ ರಾಷ್ಟ್ರಗಳಲ್ಲಿ ‘ಮೂಕ್ಸ್‌’ ಕೋರ್ಸ್‌ ಹೆಚ್ಚು ಪ್ರಚಲಿತ. ಮಸಾಚುಶೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ), ಜಾರ್ಜಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಜಿಐಟಿ) ಯಂತಹ ಸಂಸ್ಥೆಗಳಲ್ಲಿ ಮಾತ್ರ ಇದುವರೆಗೆ ಈ ಕೋರ್ಸ್‌ಗಳಿದ್ದವು. ವಿಶ್ವದಲ್ಲಿ ಕೆಲವೇ ಮಂದಿ ಈ ಕೋರ್ಸ್‌ಗೆ ನೋಂದಣಿ ಪಡೆಯುತ್ತಿದ್ದರು. ಇದನ್ನು ಗಮನಿಸಿದ ‘ಯುಜಿಸಿ’ಯು ಸ್ಟಡಿ ಆಫ್‌ ವೆಬ್‌ ಬೈ ಯಂಗ್‌ ಅಂಡ್ ಆಸ್ಪೈರಿಂಗ್ ಮೈಂಡ್ಸ್‌ (ಸ್ವಯಂ) ಎಂಬ ಯೋಜನೆಯನ್ನು ತಯಾರಿಸಿ 2018–19ನೇ ಸಾಲಿನಲ್ಲಿ ‘ಮೂಕ್ಸ್‌’ ಕೋರ್ಸ್‌ಗಳನ್ನು ಭಾರತದಲ್ಲಿ ಪರಿಚಯಿಸಿತ್ತು.

ADVERTISEMENT

ಉತ್ತೀರ್ಣ ಪ್ರಮಾಣದಲ್ಲೂ ನಂ.1: ಕೇವಲ ನೋಂದಣಿ ಮಾತ್ರವಲ್ಲದೆ, ಉತ್ತೀರ್ಣ ಪ್ರಮಾಣದಲ್ಲೂ ಮೈಸೂರು ವಿ.ವಿ ದೇಶಕ್ಕೆ ಮೊದಲ ಸ್ಥಾನ ಗಳಿಸಿದೆ. ದೇಶದಲ್ಲಿ ಒಟ್ಟು ಉತ್ತೀರ್ಣ ಪ್ರಮಾಣ ಶೇ 50ರಷ್ಟಿದೆ. ಮೈಸೂರು ವಿ.ವಿ.ಯದು ಶೇ 69.

‘ಈ ಪರೀಕ್ಷೆಗಳಲ್ಲಿ ಪಾಸಾಗುವುದು ಅಷ್ಟು ಸುಲಭದ ವಿಚಾರವಲ್ಲ. ಏಕೆಂದರೆ, ದೇಶದ ಪ್ರಮುಖ ಶಿಕ್ಷಣ ತಜ್ಞರು ಪಠ್ಯಕ್ರಮ ಸಿದ್ಧಪಡಿಸಿದ್ದಾರೆ. ಐಐಟಿ, ಐಐಎಂಗಳ ಆಯ್ದ ಪ್ರಾಧ್ಯಾಪಕರು ಈ ಕೆಲಸ ನಡೆಸಿದ್ದಾರೆ. ಪರೀಕ್ಷಾ ಕ್ರಮ ಅತ್ಯಂತ ಕಠಿಣವೂ, ಪಾರದರ್ಶಕವೂ ಆಗಿದೆ’ ಎಂದು ವಿ.ವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶೀಘ್ರವೇ ಶಿಕ್ಷಕರಿಗೂ ‘ಮೂಕ್ಸ್’: ಶಿಕ್ಷಕರಿಗೂ ‘ಮೂಕ್ಸ್‌’ ಕೋರ್ಸ್ ಆರಂಭಿಸಲು ವೇದಿಕೆ ಸಜ್ಜಾಗಿದೆ. ಶೈಕ್ಷಣಿಕ ಸಿಬ್ಬಂದಿ ವಿದ್ಯಾಲಯಗಳಲ್ಲಿ 1 ತಿಂಗಳು ನಡೆಯುವ ಸಾಂಪ್ರದಾಯಿಕ ತರಬೇತಿ ಕಾರ್ಯಕ್ರಮಗಳಿಗೆ ಸಮಾನಾಂತರವಾಗಿ ಈ ಕೋರ್ಸ್‌ಗಳು ಶುರುವಾಗಲಿವೆ. ಇದು ಶಿಕ್ಷಕರ ಜ್ಞಾನಾಭಿವೃದ್ಧಿಗೆ ಪೂರಕ ಎಂದರು.

ಮೈಥಿಲಿ ದೇಶಕ್ಕೆ ಟಾಪರ್‌

ಮೈಸೂರು ವಿ.ವಿ.ಯ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿನಿ, ಮಂಗಳೂರಿನ ಮೈಥಿಲಿ ಶ್ರೀರಾಮ್‌ ಅವರು ‘ಆಹಾರ ಸೂಕ್ಷ್ಮ ಜೀವವಿಜ್ಞಾನ ಹಾಗೂ ಆಹಾರ ಸಂರಕ್ಷಣೆ’ ವಿಷಯದಲ್ಲಿ ‘ಮೂಕ್ಸ್‌’ ಕೋರ್ಸ್‌ ತೆಗೆದುಕೊಂಡು ಶೇ 87 ಅಂಕ ಗಳಿಸಿದ್ದಾರೆ. ಇದು ದೇಶದಲ್ಲೇ ಅತ್ಯಧಿಕ ಅಂಕ.

‘ಪಠ್ಯಕ್ರಮ ತುಂಬಾ ಹಿಡಿಸಿತ್ತು. ಕಠಿಣವಾಗಿದ್ದರೂ ಜ್ಞಾನ ಪೂರಕವಾಗಿತ್ತು. ಪ್ರತಿವಾರ ಆನ್‌ಲೈನ್‌ ವಿಡಿಯೊ ಸಿಗುತ್ತಿತ್ತು. ಸಿದ್ಧಪಠ್ಯವೂ ಲಭ್ಯವಿತ್ತು. ಆಗಾಗ ರಸಪ್ರಶ್ನೆ ನಡೆಸಲಾಗುತ್ತಿತ್ತು. ಸಿದ್ಧತೆ ಅತ್ಯುತ್ತಮವಾಗಿದ್ದ ಕಾರಣ ಇಷ್ಟು ಅಂಕ ಗಳಿಸಲು ಸಾಧ್ಯವಾಯಿತು’ ಎಂದು ಮೈಥಿಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.