ADVERTISEMENT

ವಿವಿಧ ಬೇಡಿಕೆ: 80ಕ್ಕೂ ಹೆಚ್ಚು ಪ್ರತಿಭಟನೆ, ಮುಗಿದ ಅಬ್ಬರ, ಸಾರ್ವಜನಿಕರು ನಿರಾಳ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 12:00 IST
Last Updated 21 ಡಿಸೆಂಬರ್ 2018, 12:00 IST
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನಾ ಸ್ಥಳಗಳಿಗೆ ನಿಯೋಜಿಸಲಾಗಿದ್ದ ಪೊಲೀಸರನ್ನು ಶುಕ್ರವಾರ ಅವರವರ ಕರ್ತವ್ಯದ ಸ್ಥಳಗಳಿಗೆ ಕಳುಹಿಸಲಾಯಿತು
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನಾ ಸ್ಥಳಗಳಿಗೆ ನಿಯೋಜಿಸಲಾಗಿದ್ದ ಪೊಲೀಸರನ್ನು ಶುಕ್ರವಾರ ಅವರವರ ಕರ್ತವ್ಯದ ಸ್ಥಳಗಳಿಗೆ ಕಳುಹಿಸಲಾಯಿತು   

ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 80ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದವು. ವಿವಿಧ ಸಂಘ–ಸಂಸ್ಥೆಗಳು, ನೌಕರರ ಸಂಘಟನೆಗಳ ಸದಸ್ಯರು, ವೇದಿಕೆಗಳ ಕಾರ್ಯಕರ್ತರು ತಮ್ಮ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಸತ್ಯಾಗ್ರಹ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಸಿದ್ಧಪಡಿಸಿದ್ದ ಟೆಂಟ್‌ಗಳು, ಕೊಂಡಸಕೊಪ್ಪ ಗುಡ್ಡದಲ್ಲಿ ನಿಗದಿಪಡಿಸಿದ್ದ ಜಾಗದಲ್ಲಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು. ಒಟ್ಟಾರೆ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಎನ್‌ಪಿಎಸ್‌ ನೌಕರರು, ಸ್ಟೋನ್ ಕ್ರಷರ್‌ಗಳು ಹಾಗೂ ಕ್ವಾರಿಗಳ ಮಾಲೀಕರು, ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರು ಸೇರಿದಂತೆ ಕೆಲವು ಸಂಘಟನೆಗಳ ಸದಸ್ಯರು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಹಕ್ಕೊತ್ತಾಯ ಮಂಡಿಸಿದರು. ಎಲ್ಲರಿಗೂ ಸಮಸ್ಯೆಗಳ ‍ಪರಿಹಾರ ಹಾಗೂ ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರದ ಪ್ರತಿನಿಧಿಗಳಿಂದ ಭರವಸೆಯಷ್ಟೇ ದೊರೆಯಿತು!

ಬಹುತೇಕ ಪ್ರತಿಭಟನಾ ಸ್ಥಳಗಳಿಗೆ ಸಂಬಂಧಿಸಿದ ಸಚಿವರಾಗಲಿ, ಶಾಸಕರಾಗಲಿ ಬರಲಿಲ್ಲ. ಪೊಲೀಸರೇ ಐದಾರು ಮಂದಿಯನ್ನು ವಾಹನಗಳಲ್ಲಿ ಸುವರ್ಣ ವಿಧಾನಸೌಧಕ್ಕೆ ಕರೆದುಕೊಂಡು ಹೋಗಿ ಮನವಿಗಳನ್ನು ಸಲ್ಲಿಸಲು ಅನುವು ಮಾಡಿಕೊಡುವ ‘ಶಾಸ್ತ್ರ’ ಮುಗಿಸಿದರು.

ADVERTISEMENT

ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಎರಡು ಸಂಘಟನೆಗಳಷ್ಟೇ ನಡೆದವು. ಬಹುತೇಕ ಟೆಂಟ್‌ಗಳು ಖಾಲಿ ಇದ್ದವು. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಮಧ್ಯಾಹ್ನದ ನಂತರ ಟೆಂಟ್‌ಗಳು ಬಿಕೋ ಎನ್ನುತ್ತಿದ್ದವು. ಬೇಕೇ ಬೇಕು ನ್ಯಾಯ ಬೇಕು ಎನ್ನುವ ಘೋಷಣೆಗಳು ಇರಲಿಲ್ಲ. ಭದ್ರತೆಗೆ ನಿಯೋಜನೆಗೊಂಡಿದ್ದ ಬಹುತೇಕ ಪೊಲೀಸರನ್ನು ಅಲ್ಲಿನ ಕೆಲಸದಿಂದ ಬಿಡುಗಡೆಗೊಳಿಸಲಾಗಿತ್ತು. ಬೇರೆ ಜಿಲ್ಲೆಗಳಿಂದ ಬಂದಿದ್ದ ಪೊಲೀಸರು ತಮ್ಮೂರಿನತ್ತ ಹೊರಡುತ್ತಿದ್ದುದು ಕಂಡುಬಂತು.

ಬೇರೆ ಜಿಲ್ಲೆಗಳಿಂದ ಬಂದಿದ್ದ ಪೊಲೀಸರು ಮಾತ್ರವಲ್ಲದೇ, ವಿಧಾನಸಭೆ ಸಚಿವಾಲಯ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ, ನೌಕರರು ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲಿನ ಪ್ರಮುಖ ತಿನಿಸುಗಳಾದ ‘ಕುಂದಾ’ ಹಾಗೂ ‘ಕರದಂಟು’ ಖರೀದಿಸಿಕೊಂಡು ಹೋಗುತ್ತಿದ್ದುದು ಕೂಡ ಸಾಮಾನ್ಯವಾಗಿತ್ತು. ಇದರಿಂದಾಗಿ ಸ್ವೀಟ್‌ ಮಾರ್ಟ್‌ಗಳ ಬಳಿ ಜನಜಂಗುಳಿ ಕಂಡುಬಂದಿತು. ಕುಂದಾಗೆ ಹೆಚ್ಚಿನ ಬೇಡಿಕೆ ಇತ್ತು.

ಅಧಿವೇಶನ ಮುಗಿಯುತ್ತಿದ್ದಂತೆಯೇ, ನಗರದಲ್ಲಿ ಶಾಸಕರು, ಸಚಿವರ ವಾಹನಗಳ ಅಬ್ಬರ ಕಡಿಮೆಯಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಅಧಿವೇಶನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಮಾಧಾನದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಕಮಿಷನರೇಟ್‌ ಅಧಿಕಾರಿಗಳದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.