ADVERTISEMENT

ಮೇಲ್ಮನೆ ಚುನಾವಣೆ: ಶೇ 99.80 ರಷ್ಟು ಮತದಾನ

ಮಧ್ಯಾಹ್ನದ ಬಳಿಕ ಬಿರುಸುಗೊಂಡ ಮತದಾನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 20:30 IST
Last Updated 10 ಡಿಸೆಂಬರ್ 2021, 20:30 IST
ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ
ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ    

ಬೆಂಗಳೂರು: ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿದ್ದು, ಸುಮಾರು ಶೇ 99.80 ರಷ್ಟು ಮತ ಚಲಾವಣೆಯಾಗಿದೆ.

ಬೆಳಿಗ್ಗೆ 8ಕ್ಕೆ ಮತದಾನ ಆರಂಭಗೊಂಡಿತು. ಮಧ್ಯಾಹ್ನದವರೆಗೆ ಕೆಲವು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ತೀರಾ ಕಡಿಮೆ ಇತ್ತು. ಮಧ್ಯಾಹ್ನ 2 ಗಂಟೆ ಬಳಿಕ ಮತದಾನ ಬಿರುಸುಗೊಂಡಿತು. ಚಿತ್ರದುರ್ಗದಲ್ಲಿ ಮಧ್ಯಾಹ್ನ 2 ಗಂಟೆಗೆ ಮತದಾನ ಪ್ರಮಾಣ ಶೇ 10 ರಷ್ಟು ಮಾತ್ರ ಆಗಿತ್ತು. ಬಳಿಕ ಎರಡೇ ಗಂಟೆಗಳ ಅವಧಿಯಲ್ಲಿ ಶೇ 88 ರಷ್ಟು ಮತಗಳ ಚಲಾವಣೆ ಆಯಿತು.

ಮತಗಳ ಎಣಿಕೆ ಇದೇ 14 ರಂದು ನಡೆಯಲಿದ್ದ, ಅಂದೇ ಫಲಿತಾಂಶ ಪ್ರಕಟವಾಗಲಿದೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ, ಜೆಡಿಎಸ್‌ನ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ ಚಲಾವಣೆ ಮಾಡಿದವರಲ್ಲಿ ಪ್ರಮುಖರು.

ADVERTISEMENT

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಾಲೂರು–ಕೊಳಿಗೆ ಗ್ರಾಮ ಪಂಚಾಯಿತಿಗೆ ಮೂರು ವರ್ಷಗಳಿಂದ ಮರಳು ಗಣಿಗಾರಿಕೆಯ ರಾಜಧನ₹ 2.48 ಕೋಟಿ ನೀಡಿಲ್ಲ ಎಂಬ ಕಾರಣಕ್ಕೆ ಪಂಚಾಯ್ತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸೇರಿ ಎಲ್ಲ 7 ಸದಸ್ಯರು ಮತದಾನ ಬಹಿಷ್ಕರಿಸಿದ್ದರು. ಈ ಪೈಕಿ ಆರು ಸದಸ್ಯರು ಕೊನೆಗಳಿಗೆಯಲ್ಲಿ ಮತಚಲಾಯಿಸಿದರು.

ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹಂತೇಶ ಕವಟಗಿಮಠ ಅವರು ಸಮಯ ನೋಡಿಕೊಂಡು ಮತ ಚಲಾವಣೆ ಮಾಡಿದರೆ, ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಮ್ಮ ಪಕ್ಷದ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಅವರ ಕಾಲಿಗೆ ನಮಸ್ಕರಿಸಿದರು. ಮತದಾನದ ವೇಳೆ ಅವರು ತಮ್ಮ ಮೊಬೈಲ್‌ ಫೋನ್‌ನಲ್ಲಿದ್ದ ತುಮಕೂರಿನ ನೊಣವಿನಕೆರೆಯ ಕಾಡಸಿದ್ಧೇಶ್ವರ ಮಠದ ವೀರಗಂಗಾಧರಯ್ಯ ಸ್ವಾಮೀಜಿ ಫೋಟೊ ಪ್ರದರ್ಶಿಸಿ ಗಮನ ಸೆಳೆದರು.

ಮತದಾನದ ವೇಳೆ ಸಣ್ಣಪುಟ್ಟ ತಾಂತ್ರಿಕ ಗೊಂದಲ ಬಿಟ್ಟರೆ, ಉಳಿದಂತೆ ಶಾಂತವಾಗಿಯೇ ಮತದಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.