ADVERTISEMENT

ತಾಯಿ, ಶಿಶುಗಳ ಸಾವು: ‘ಪ್ರಜಾವಾಣಿ’ ವರದಿ ಆಧರಿಸಿ ‍ಪ್ರಕರಣ ದಾಖಲಿಸಿದ ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 15:53 IST
Last Updated 4 ನವೆಂಬರ್ 2022, 15:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತುಮಕೂರಿನಲ್ಲಿ ಆಧಾರ್‌ ಕಾರ್ಡ್‌ ಮತ್ತು ತಾಯಿ ಕಾರ್ಡ್‌ ಇಲ್ಲ ಎಂದು ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ್ದರಿಂದ ತಾಯಿ ಹಾಗೂ ಶಿಶುಗಳು ಮೃತಪಟ್ಟ ಘಟನೆ ಕುರಿತು ‘ಪ್ರಜಾವಾಣಿ’ ವರದಿ ಆಧರಿಸಿ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಆರಂಭಿಸಿದ್ದಾರೆ.

ತುಮಕೂರಿನ ಭಾರತಿನಗರದ ನಿವಾಸಿ ಕಸ್ತೂರಿ (30) ಎಂಬುವವರನ್ನು ಸೇರಿಸಿಕೊಳ್ಳಲು ತುಮಕೂರು ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದರು. ತೀವ್ರ ರಕ್ತಸ್ರಾವದಿಂದ ಮಹಿಳೆ ಮತ್ತು ಅವಳಿ ಶಿಶುಗಳು ಗುರುವಾರ ಮೃತಪಟ್ಟಿದ್ದರು. ಈ ಕುರಿತು ‘ಪ್ರಜಾವಾಣಿ’ಯ ಶುಕ್ರವಾರದ ಸಂಚಿಕೆಯಲ್ಲಿ ‘ತಾಯಿ, ಅವಳಿ ಶಿಶುಗಳ ಸಾವು’ ಶೀರ್ಷಿಕೆಯಡಿ ಪ್ರಕಟವಾದ ವರದಿ ಆಧರಿಸಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಆದೇಶ ಹೊರಡಿಸಿದ್ದಾರೆ.

ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ನಿರ್ದೇಶಕರು, ಆಯುಕ್ತರು, ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಮತ್ತು ಶುಶ್ರೂಷಾ ಅಧೀಕ್ಷಕರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಚಿಕಿತ್ಸೆ ನಿರಾಕರಿಸಿ ತಾಯಿ ಮತ್ತು ಅವಳಿ ಶಿಶುಗಳ ಸಾವಿಗೆ ಕಾರಣವಾದ ಆರೋಪದ ಕುರಿತು ಪ್ರತಿಕ್ರಿಯಿಸುವಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೆ ಆದೇಶಿಸಲಾಗಿದೆ.

ADVERTISEMENT

ಪ್ರಕರಣದ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತದ ತುಮಕೂರು ಎಸ್‌ಪಿಗೆ ನಿರ್ದೇಶನ ನೀಡಲಾಗಿದೆ. ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ಪ್ರತಿವಾದಿಗಳಿಗೆ ಸೂಚಿಸಲಾಗಿದೆ. ಡಿಸೆಂಬರ್‌ 12ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

ತಾಯಿ ಮೃತಪಟ್ಟಿರುವುದರಿಂದ ಅನಾಥವಾಗಿರುವ ಆರು ವರ್ಷದ ಹೆಣ್ಣು ಮಗುವಿನ ವಸತಿ, ಜೀವನೋಪಾಯ ಮತ್ತು ಶಿಕ್ಷಣಕ್ಕೆ ಸರ್ಕಾರದ ಯೋಜನೆಗಳ ಅಡಿಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರು ಜಿಲ್ಲಾ ಉಪ ನಿರ್ದೇಶಕರಿಗೆ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.