ಸಂಸದ ಸುಧಾಕರ್
ಬೆಂಗಳೂರು: 2024ರ ಲೋಕಸಭೆ ಚುನಾವಣೆ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾದಾವರ ಗ್ರಾಮದಲ್ಲಿ ಗೋವಿಂದಪ್ಪ ಅವರ ಮನೆಯಲ್ಲಿ ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ ₹4.8 ಕೋಟಿ ಮೊತ್ತದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ‘ನನ್ನ ವಿರುದ್ಧದ ದೋಷಾರೋಪ ಪಟ್ಟಿ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ಡಾ.ಕೆ.ಸುಧಾಕರ್ ಹಾಗೂ ಗೋವಿಂದಪ್ಪ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಸುಧಾಕರ್ ಪರ ಪದಾಂಕಿತ ಹಿರಿಯ ವಕೀಲರುಗಳಾದದ ಬಿ.ವಿ.ಆಚಾರ್ಯ, ಬಿ.ಎಲ್.ಆಚಾರ್ಯ ಮತ್ತು ಗೋವಿಂದಪ್ಪ ಪರ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಿದ್ದರು.
ಪ್ರಕರಣವೇನು?: 2024ರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಹಿಂದಿನ ದಿನ ಚುನಾವಣಾ ಆಯೋಗದ ಅಧಿಕಾರಿಗಳು ಗೋವಿಂದಪ್ಪ ಅವರ ಮನೆಯಿಂದ ₹4.8 ಕೋಟಿ ಜಪ್ತಿ ಮಾಡಿದ್ದರು.
‘ಜಪ್ತಿ ಮಾಡಲಾದ ಹಣ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚುವುದಕ್ಕಾಗಿ ಸಂಗ್ರಹಿಸಿದ್ದ ಮೊತ್ತ’ ಎಂದು ಹೇಳಲಾಗಿತ್ತು. ಈ ಪುಕಾರುಗಳ ಬೆನ್ನಲ್ಲೇ ಸುಧಾಕರ್ ಅವರು, ಚುನಾವಣಾ ನೀತಿ ಸಂಹಿತೆ ಜಾರಿಯ ಜವಾಬ್ದಾರಿ ಹೊತ್ತಿದ್ದ ರಾಜ್ಯ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ವಾಟ್ಸ್ ಆ್ಯಪ್ ಮೆಸೇಜ್ ಮಾಡಿ, ‘ತಾವು ನನಗೆ ಸಹಾಯ ಮಾಡಿದರೆ ಆಭಾರಿಯಾಗಿರುತ್ತೇನೆ’ ಎಂದು ಕೇಳಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು, ನೆಲಮಂಗಲ ಜೆಎಂಎಫ್‌ಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ರದ್ದುಪಡಿಸುವಂತೆ ಕೋರಿ ಸುಧಾಕರ್ ಹಾಗೂ ಗೋವಿಂದಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.