
ಸಿದ್ದರಾಮಯ್ಯ
ಬೆಂಗಳೂರು: ‘ಎಂಎಸ್‌ಐಎಲ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಇದರಲ್ಲಿ ಯಾರು ಹಣ ಹೂಡುತ್ತಾರೊ ಅವರ ಹಣ ಸುರಕ್ಷಿತವಾಗಿರುತ್ತದೆ. ಮೋಸ ಆಗಲು ಸಾಧ್ಯವೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಅವರು ಎಂಎಸ್ಐಎಲ್‌ನ ‘ಎಂಎಸ್ಐಎಲ್ ಚಿಟ್ಸ್’ ಹೊಸ ತಂತ್ರಾಂಶ ಮತ್ತು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಎಂಎಸ್ಐಎಲ್ ಆರಂಭವಾಗಿ 60 ವರ್ಷಗಳಾಯಿತು. ಇದು ಜನರ ವಿಶ್ವಾಸ, ನಂಬಿಕೆ, ಪ್ರೀತಿ ಉಳಿಸಿಕೊಳ್ಳುವ ಕೆಲಸ ಮಾಡಿದೆ. 2005ರಿಂದ ಚಿಟ್ ಫಂಡ್ ವ್ಯವಹಾರ ಆರಂಭವಾಗಿತ್ತು. ಆರಂಭದಲ್ಲಿ ಅಷ್ಟ ದೊಡ್ಡ ಪ್ರಮಾಣದಲ್ಲಿ ಆಗಿರಲಿಲ್ಲ. ಇತ್ತೀಚೆಗೆ ಎಂಎಸ್ಐಎಲ್‌ನವರು ಈ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ’ ಎಂದರು.
‘ಗೃಹ ಲಕ್ಷ್ಮಿ ಯೋಜನೆಯಲ್ಲಿ ನಾವು ₹ 2 ಸಾವಿರ ಕೊಡುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರು ಉಚಿತ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಗೃಹ ಜ್ಯೋತಿ ಯೋಜನೆಯಲ್ಲಿ ಯಾರು ಕೂಡಾ ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಅನ್ನ ಭಾಗ್ಯದಲ್ಲಿ ಅಕ್ಕಿ ಕೊಡುತ್ತಿದ್ದೇವೆ. ಹೀಗಾಗಿ, ಹಣ ಉಳಿತಾಯ ಆಗುತ್ತದೆ. ಹೀಗೆ ಉಳಿತಾಯ ಆಗುವ ಹಣ ಹೂಡಿಕೆ ಮಾಡಿದರೆ, ಬೇಕಾದ ಸಮಯದಲ್ಲಿ ಬಳಕೆ ಮಾಡಬಹುದು’ ಎಂದು ಸಲಹೆ ನಿಡಿದರು.
‘ಹಳ್ಳಿ ಕಡೆ ಚೀಟಿ ಹಾಕುತ್ತಾರೆ. ಕೆಲವರು ಮೋಸ ಮಾಡುತ್ತಾರೆ. ಖಾಸಗಿ ಚೀಟಿಗಳಲ್ಲಿ ಗ್ಯಾರಂಟಿ ಇಲ್ಲ. ಎಂಎಸ್‌ಐಎಲ್ ಸರ್ಕಾರಿ ಸಂಸ್ಥೆ ಆಗಿರುವುದರಿಂದ, ಇಲ್ಲಿ ಹಣಕ್ಕೆ ಗ್ಯಾರಂಟಿ ಇದೆ. ಹಣ ವಾಪಸ್ ಬರುತ್ತದೆ ಎಂದು ನಂಬಿಕೆ ಇಟ್ಟುಕೊಳ್ಳಬಹುದು’ ಎಂದರು.
‘ಎಂಎಸ್‌ಐಎಲ್‌ನವರು ಶೇ 5ರಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ. ಲಾಭ ಮಾಡುತ್ತಾರೆ. ಅದು ಮಾಡಲೇಬೇಕು. ಕೇರಳದಲ್ಲಿ ಚಿಟ್ಸ್‌ನಲ್ಲಿ ₹ 47 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ. ನಾವು ಎರಡು ವರ್ಷಗಳಲ್ಲಿ ₹ 5 ಸಾವಿರ ಕೋಟಿ, ನಂತರ ವರ್ಷಗಳಲ್ಲಿ ₹ 10 ಸಾವಿರ ಕೋಟಿ ವಹಿವಾಟು ಮಾಡುವ ಗುರಿ ಇದೆ’ ಎಂದರು.
‘ಮ್ರೈಕ್ರೊ ಫೈನಾನ್ಸ್‌ನಲ್ಲಿ ಬಹಳ ಜನ ಹಣ ಕಳೆದುಕೊಂಡಿದ್ದಾರೆ. ಅದಕ್ಕಾಗಿ ನಾವು ಕಾನೂನು ಮಾಡಿದ್ದೇವೆ. ಮೈಕ್ರೊ ಫೈನಾನ್ಸ್‌ನವರು ಸಾಲು ಕೊಟ್ಟು ಕಿರುಕುಳ ಕೊಡಬಾರದು. ಸಾಲ ಪಡೆದವರು ಕಿರುಕುಳಕ್ಕೆ ಒಳಗಾಗಬಾರದು ಎಂದು ಕಾಯ್ದೆ ಮಾಡಿದ್ದೇವೆ’ ಎಂದೂ ಹೇಳಿದರು.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಎಸ್‌ಐಎಲ್ ಅಧ್ಯಕ್ಷ ಪುಟ್ಟರಂಗ ಶೆಟ್ಟಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.