ADVERTISEMENT

ಮುಡಾ ಹಗರಣ: ಮೇಲ್ಮನವಿ ಸಲ್ಲಿಸಿದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:57 IST
Last Updated 24 ಅಕ್ಟೋಬರ್ 2024, 15:57 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ನೀಡಿರುವ ಅನುಮತಿಗೆ ಅಸ್ತು ಎಂದಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠ ತೀರ್ಪು ಪ್ರಶ್ನಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ತಿಂಗಳ ಬಳಿಕ ಮೇಲ್ಮನವಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠದಲ್ಲಿ ಸಿದ್ದರಾಮಯ್ಯ ಈ ರಿಟ್‌ ಮೇಲ್ಮನವಿ ಸಲ್ಲಿಸಿದ್ದು, ಇದು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಸಿದ್ದರಾಮಯ್ಯ ವಿರುದ್ಧದ ಪ್ರಕರಣದ ತನಿಖೆಗೆ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಕಳೆದ ತಿಂಗಳ 24ರಂದು ಅಸ್ತು ಎಂದು ತೀರ್ಪು ನೀಡಿದ್ದರು.

ಏನಿದು ವಿವಾದ?: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಒಡೆತನದ್ದು ಎನ್ನಲಾದ ಕೃಷಿ ಭೂಮಿಯನ್ನು ಮುಡಾ ವಶಪಡಿಸಿಕೊಂಡು ಅದಕ್ಕೆ ಪರ್ಯಾಯವಾಗಿ 14 ನಿವೇಶನಗಳನ್ನು ಪ್ರಮುಖ ಜಾಗದಲ್ಲಿ ಹಂಚಿಕೆ ಮಾಡಿದೆ’ ಎನ್ನುವುದು ವಿವಾದದ ಕೇಂದ್ರ ಬಿಂದು.

ADVERTISEMENT

‘ಪರಿಹಾರ ರೂಪದಲ್ಲಿ ನೀಡಲಾದ ನಿವೇಶನಗಳ ಹಂಚಿಕೆ ಪ್ರಕ್ರಿಯೆಯೇ ಅಕ್ರಮದಿಂದ ಕೂಡಿದೆ. ಇಡೀ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯನವರು ಪ್ರಭಾವ ಬೀರಿರುವುದು ಕಂಡು ಬಂದಿದೆ’ ಎಂದು ಆರೋಪಿಸಲಾದ ಮೂರು ಖಾಸಗಿ ದೂರುಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಇವುಗಳನ್ನು ಆಧರಿಸಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರು ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಕಲಂ (ಪಿಸಿ ಕಾಯ್ದೆ) 17ಎ ಅಡಿ ತನಿಖೆ ನಡೆಸಲು 2024ರ ಆಗಸ್ಟ್ 17ರಂದು ಮಂಜೂರಾತಿ ನೀಡಿದ್ದರು. ‘ರಾಜ್ಯಪಾಲರು ಹೊರಡಿಸಿರುವ ಈ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿ ಸಿದ್ದರಾಮಯ್ಯ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ ತನಿಖೆಗೆ ಅಸ್ತು ಎಂದಿತ್ತು. ಈ ಬೆನ್ನಲ್ಲೇ, ಮೈಸೂರಿನ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.