ADVERTISEMENT

MUDA Scam | ಸಿಎಂ ಪತ್ನಿ ಪಾರ್ವತಿ, ಸಚಿವ ಸುರೇಶ್ ವಿರುದ್ಧದ ಇ.ಡಿ ಪ್ರಕರಣ ರದ್ದು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 11:30 IST
Last Updated 7 ಮಾರ್ಚ್ 2025, 11:30 IST
<div class="paragraphs"><p> ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಅಕ್ರಮ ಹಂಚಿಕೆ ಆರೋಪದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿದ್ದ ಇಸಿಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

‘ಜಾರಿ ನಿರ್ದೇಶನಾಲಯ ನಮಗೆ ಸಮನ್ಸ್‌ ನೀಡಿರುವುದನ್ನು ಹಾಗೂ ಇಸಿಐಆರ್ (ಎನ್‌ಫೋರ್ಸ್‌ಮೆಂಟ್‌ ಕೇಸ್‌ ಇನ್‌ಫಾರ್ಮೇಶನ್‌ ರಿಪೋರ್ಟ್‌) ದಾಖಲಿಸಿರುವುದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಪಾರ್ವತಿ ಮತ್ತು ಸುರೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ADVERTISEMENT

ಅರ್ಜಿದಾರರ ವಾದ ಏನಿತ್ತು?:

ಸಿ.ಎಂ ಪತ್ನಿ ಪಾರ್ವತಿ ಅವರ ಪರ ವಾದ ಮಂಡಿಸಿದ್ದ ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ. ಚೌಟ ಅವರು, ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) 14 ನಿವೇಶನಗಳನ್ನು ಪಾರ್ವತಿ ಅವರು 2024ರ ಅಕ್ಟೋಬರ್ 1ರಂದೇ ಹಿಂತಿರುಗಿಸಿದ್ದಾರೆ. ಅವರು ನಿವೇಶನಗಳಿಂದ ಪ್ರಯೋಜನ‌ ಪಡೆಯುತ್ತಿಲ್ಲ. ಇದು ಇ.ಡಿ ತನಿಖಾ ವ್ಯಾಪ್ತಿಯಲ್ಲಿ ಇಲ್ಲ. ಅಪರಾಧದಿಂದ ಗಳಿಸಿದ ಸಂಪತ್ತಿದ್ದರೆ ಮಾತ್ರ ಇ.ಡಿ ತನಿಖೆ ನಡೆಸಬಹುದು. ಆದರೆ, ನಿವೇಶನಗಳನ್ನು ಮರಳಿಸಿದ ನಂತರ ಇ.ಡಿ ತನಿಖೆ ಆರಂಭಿಸಿದೆ" ಎಂದು ಪ್ರತಿಪಾದಿಸಿದ್ದರು.

‘ಲೋಕಾಯುಕ್ತ ಪೊಲೀಸರ ತನಿಖಾ ವ್ಯಾಪ್ತಿಯಲ್ಲಿ ಇ.ಡಿ ಪ್ರವೇಶಿಸಿದೆ. ಈಗಾಗಲೇ, ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ಯಾವುದೇ ಅಕ್ರಮ ಕಂಡು ಬಂದಿಲ್ಲ ಎಂದು ‘ಬಿ’ ರಿಪೋರ್ಟ್‌ ಸಲ್ಲಿಸಿದ್ದಾರೆ. ಆದ್ದರಿಂದ, ಇ.ಡಿ ದಾಖಲಿಸಿರುವ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿದ್ದರು.

ಸಚಿವ ಬೈರತಿ ಸುರೇಶ್ ಪರ ವಾದ ಮಂಡಿಸಿದ್ದ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು,
‘ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆ ಮಾಡಿರುವಲ್ಲಿ ಯಾವುದೇ ಅಪರಾಧ ಅಥವಾ ಅಕ್ರಮ ಗಳಿಕೆಗೆ ಕಾರಣವಾದ ಅಂಶಗಳಿಲ್ಲ. ಸುರೇಶ್‌ ಅವರು 2023ರ ಜೂನ್‌ನಲ್ಲಿ ನಗರಾಭಿವೃದ್ಧಿ ಮಂತ್ರಿಯಾಗಿದ್ದಾರೆ. ಈ ಅಪರಾಧ ಆರೋಪದಲ್ಲಿ ಅವರು ಭಾಗಿಯಾಗಿಲ್ಲ. ಅಷ್ಟಕ್ಕೂ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್‌ ಅವರಿಗೆ ಇ.ಡಿ ಜಾರಿ ಮಾಡಿದ್ದ ಸಮನ್ಸ್‌ ಅನ್ನು ಬೇರೊಂದು ಪ್ರಕರಣದಲ್ಲಿ‌ ಇದೇ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಈಗಾಗಲೇ ವಜಾ ಮಾಡಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.