ADVERTISEMENT

ತುಮಕೂರು: ಬಿಜೆಪಿ ಸೇರ್ಪಡೆಗೆ ಮುದ್ದಹನುಮೇಗೌಡ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 21:35 IST
Last Updated 3 ಸೆಪ್ಟೆಂಬರ್ 2022, 21:35 IST
ಬೆಂಗಳೂರಿನಲ್ಲಿ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಾಜಿ ಸಂಸದ ಎಸ್.‍ಪಿ.ಮುದ್ದಹನುಮೇಗೌಡ ಭೇಟಿಯಾದರು
ಬೆಂಗಳೂರಿನಲ್ಲಿ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಾಜಿ ಸಂಸದ ಎಸ್.‍ಪಿ.ಮುದ್ದಹನುಮೇಗೌಡ ಭೇಟಿಯಾದರು   

ತುಮಕೂರು: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಮಾಜಿ ಸಂಸತ್ ಸದಸ್ಯ ಎಸ್.‍ಪಿ.ಮುದ್ದಹನುಮೇಗೌಡ ಅವರು ಬಿಜೆಪಿ ಮುಖಂಡರನ್ನು ಶನಿವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ಬಿಜೆಪಿ ಸೇರಲು ನಿರ್ಧರಿಸಿದ್ದಾರೆ.

ಪಿತೃ ಪಕ್ಷ ಆರಂಭಕ್ಕೂ ಮುನ್ನ ಬಿಜೆಪಿ ಸೇರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನೂ ಒಂದೆರಡು ದಿನಗಳಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಮೂಲಗಳು ಹೇಳಿವೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಗೌಡರು ಪಟ್ಟು ಹಿಡಿದಿದ್ದರು. ಇದು ಕೈಗೂಡುವ ಲಕ್ಷಣಗಳು ಕಾಣದಿದ್ದಾಗ ಕಾಂಗ್ರೆಸ್ ತೊರೆದಿದ್ದು, ಈಗ ಬಿಜೆಪಿ ಕದ ತಟ್ಟಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.

ADVERTISEMENT

ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ನಾಯಕರ ಜತೆಗೆ ಚರ್ಚೆ ನಡೆಸಿದರು. ಇತ್ತೀಚಿನ ರಾಜಕೀಯ ಬೆಳವಣಿಗೆ, ಕಾಂಗ್ರೆಸ್‌ನಲ್ಲಿ ತಮಗಾದ ನೋವು, ಅಪಮಾನ ಮತ್ತಿತರ ವಿಚಾರಗಳು ಈ ಸಂದರ್ಭದಲ್ಲಿ ಚರ್ಚೆಯಾದವು. ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಬಿಜೆಪಿ ಟಿಕೆಟ್ ಖಚಿತಪಡಿಸಿಕೊಂಡು, ಪಕ್ಷ ಸೇರ್ಪಡೆಗೆ ಆಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುಣಿಗಲ್ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಡಿ.ಕೃಷ್ಣಕುಮಾರ್ ಮತ್ತೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಈಗ ಅವರ ಮನವೊಲಿಸಿ, ಗೌಡರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಒಂದು ವೇಳೆ ಕೃಷ್ಣಕುಮಾರ್ ಬಂಡಾಯವೆದ್ದರೆ ಅವರನ್ನು ಯಾವ ರೀತಿ ಸಮಾಧಾನ ಮಾಡಬೇಕು, ಪಕ್ಷದಲ್ಲೇ ಉಳಿಸಿಕೊಂಡು ಚುನಾವಣೆ ಎದುರಿಸಲು ಯಾವ ರೀತಿಯತಂತ್ರಗಾರಿಕೆ ರೂಪಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.