ADVERTISEMENT

ಕಾಂಗ್ರೆಸ್‌ ಮುಳುಗುವ ಹಡಗು, ನಾನ್ಯಾಕೆ ಸೇರಲಿ: ಮೂಡಿಗೆರೆ ಶಾಸಕ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 12:45 IST
Last Updated 16 ಜೂನ್ 2022, 12:45 IST
ಮೂಡಿಗೆರೆ ಶಾಸಕ MP ಕುಮಾರಸ್ವಾಮಿ
ಮೂಡಿಗೆರೆ ಶಾಸಕ MP ಕುಮಾರಸ್ವಾಮಿ   

ಬೆಂಗಳೂರು: ‘ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಆ ಪಕ್ಷವನ್ನು ನಾನ್ಯಾಕೆ ಸೇರಲಿ? ಮೋಟಮ್ಮ ಮತ್ತು ನನಗಾಗದವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಮೂಡಿಗೆರೆಯ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೋಟಮ್ಮ ಹಿರಿಯ ನಾಯಕಿ, ಅವರು ಬೇಕಾಬಿಟ್ಟಿ ಮಾತನಾಡಬಾರದು. ವೃಥಾ ನನ್ನ ವಿಚಾರಕ್ಕೆ ಬಂದರೆ ಸುಮ್ಮನಿರುವುದಿಲ್ಲ’ ಎಂದೂ ತಿಳಿಸಿದರು.

‘ಬಿಜೆಪಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಮೂರು ಬಾರಿ ಶಾಸಕನಾಗಲು ಅವಕಾಶ ನೀಡಿ, ಗೌರವ ನೀಡಿದೆ. ಇವೆಲ್ಲ ಮೋಟಮ್ಮ ಅವರಿಗೆ ಹೇಗೆ ಅರ್ಥ ಆಗಬೇಕು? ಅರಳು ಮರಳು ಹಿಡಿದವರಂತೆ ಅರ್ಥಹೀನ ಹೇಳಿಕೆಗಳನ್ನು ನೀಡುವುದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ’ ಎಂದೂ ಕುಮಾರಸ್ವಾಮಿ ತಿಳಿಸಿದರು.

ADVERTISEMENT

‘ಸದ್ಯವೇ ಮಂತ್ರಿ ಮಂಡಲ ವಿಸ್ತರಣೆ ಆಗಲಿದೆ. ನನಗೆ ಸಚಿವ ಸ್ಥಾನ ಸಿಗುವುದನ್ನು ತಪ್ಪಿಸಲು ಕಾಣದ ಕೈಗಳು ನಿಮ್ಮ (ಮೋಟಮ್ಮ) ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ. ಯಾರದ್ದೋ ಮಾತು ಕೇಳಿ ನನ್ನ ವಿರುದ್ಧ ಹೇಳಿಕೆಗಳನ್ನು ಕೊಡುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ನಿಜವಾದ ನಾಯಕಿಯಾಗಿದ್ದರೆ, ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಪ್ರಯತ್ನ ಮಾಡಿ, ಆಗ ನಿಮಗೆ ತಕ್ಕ ಉತ್ತರ ನೀಡುತ್ತೇನೆ’ ಎಂದೂ ಹೇಳಿದರು.

ಕಾಂಗ್ರೆಸ್ ನಾಯಕಿ ಮೋಟಮ್ಮ ಅವರು ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವುದನ್ನು ವಿರೋಧಿಸುತ್ತೇನೆ. ಅವರು ಪಕ್ಷಕ್ಕೆ ಬಂದರೆ ಸರಿ ಇರುವುದಿಲ್ಲ. ಅವರಿಗೆ ಟಿಕೆಟ್‌ ಕೊಡುವುದಕ್ಕಿಂತ ಕಾಂಗ್ರೆಸ್‌ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡುವುದು ಸೂಕ್ತ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.