
ಗಣರಾಜ್ಯೋತ್ಸವ ಪರೇಡ್ (ಸಂಗ್ರಹ ಚಿತ್ರ)
ಮೈಸೂರು: ಕೇಂದ್ರ ಸರ್ಕಾರದ 'ಮುದ್ರಾ' ಯೋಜನೆಯಡಿ ಸಾಲ ಪಡೆದು ಸಣ್ಣಉದ್ಯಮ ನಡೆಸುತ್ತಿರುವ ಇಲ್ಲಿನ ರಾಮಕೃಷ್ಣನಗರ 'ಎಚ್' ಬ್ಲಾಕ್ ನಿವಾಸಿ ಸರಸ್ವತಿ ಎಂ. ಅವರನ್ನು ಜ.26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.
ಆರ್ಥಿಕ ಒಳಗೊಳ್ಳುವಿಕೆ ವಿಭಾಗದಿಂದ ಅವರನ್ನು ಆಹ್ವಾನಿಸಲಾಗಿದೆ. ತಂಡದ ಪಿ.ಪುಷ್ಪಾ ಅವರನ್ನೂ ಕರೆದುಕೊಂಡು ಬರುವಂತೆ ತಿಳಿಸಲಾಗಿದೆ.
ಈ ಫಲಾನುಭವಿಗಳನ್ನು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಟಿ.ಎಸ್. ಶ್ರೀವತ್ಸ, 'ಮುದ್ರಾ ಯೋಜನೆಯಲ್ಲಿ ಜಿಲ್ಲೆಗೆ 2019ರಿಂದ 2025ರವರೆಗೆ ₹ 10ಸಾವಿರ ಕೋಟಿ ಸಾಲ ದೊರೆತಿದೆ. ಇದರಲ್ಲಿ 2025ರ ಏ.1ರಿಂದ ಅಕ್ಟೋಬರ್ 31ರವರೆಗೆ ₹ 3ಸಾವಿರ ಕೋಟಿ ನೀಡಲಾಗಿದೆ. 5.60 ಲಕ್ಷ ಮಂದಿ ಫಲಾನುಭವಿಗಳಾಗಿ ಹಣಕಾಸಿನ ನೆರವು ಪಡೆದಿದ್ದಾರೆ' ಎಂದು ತಿಳಿಸಿದರು.
'ಗಣರಾಜ್ಯೋತ್ಸವ ಪರೇಡ್‌ಗೆ ಸರಸ್ವತಿ ಅವರನ್ನು ಆಹ್ವಾನಿಸಲಾಗಿದೆ. ಅವರು ಮೂರು ಬಾರಿ ಹಣಕಾಸಿನ ನೆರವು ಪಡೆದು ಸಕಾಲದಲ್ಲಿ ಸಾಲ ಪಾವತಿಸಿದ್ದಾರೆ. ಹೊಲಿಗೆ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಮನೆಯ ಮೇಲೆ ಬೊಟಿಕ್ ಇಟ್ಟುಕೊಂಡಿದ್ದಾರೆ. ಯೂನಿಯನ್ ಬ್ಯಾಂಕ್ ಮೂಲಕ ಹಣಕಾಸಿನ ನೆರವು ಪಡೆದುಕೊಂಡಿದ್ದಾರೆ. ಅವರು ದೆಹಲಿಗೆ ಹೋಗಿ ಬರಲು ತಗಲುವ ಖರ್ಚನ್ನು ಸರ್ಕಾರ ನೋಡಿಕೊಳ್ಳುತ್ತದೆ' ಎಂದು ಹೇಳಿದರು.
ಸಹಕಾರಿಯಾಗಿದೆ: ‘ಈ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ’ ಎಂದರು.
ಸರಸ್ವತಿ ಮಾತನಾಡಿ, ‘ನನ್ನನ್ನು ಗುರುತಿಸಿ ಗೌರವಿಸುತ್ತಿರುವುದಕ್ಕೆ ವಂದಿಸುತ್ತೇನೆ. ಮುದ್ರಾ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಸಣ್ಣ ಉದ್ಯಮದಿಂದ ಇಬ್ಬರಿಂದ ಮೂವರಿಗೆ ಕೆಲಸ ಕೊಟ್ಟಿದ್ದೇನೆ. ಇದು ಹೆಮ್ಮೆ ಮೂಡಿಸಿದೆ’ ಎಂದು ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ಮುದ್ರಾ ಯೋಜನೆಗೆ ಚಾಲನೆ ನೀಡಿದ ಹೊಸದರಲ್ಲೇ ನಾನು ₹ 2.25 ಲಕ್ಷ ಸಾಲ ತೆಗೆದುಕೊಂಡಿದ್ದೆ. ಈಗ ₹ 10 ಲಕ್ಷ ಸಾಲ ಪಡೆದುಕೊಂಡಿದ್ದೇನೆ’ ಎಂದು ತಿಳಿಸಿದರು.
‘ಸಣ್ಣ ಬಾಡಿಗೆ ಮನೆಯಲ್ಲಿದ್ದೆ. ಸಾಲ ಮಾಡಿ ಸ್ವಂತ ಮನೆ ತೆಗೆದುಕೊಳ್ಳುವಷ್ಟು ಸಾಮರ್ಥ್ಯ ಬಂದಿದೆ. ಇದಕ್ಕಾಗಿ ಮುದ್ರಾ ಯೋಜನೆ ರೂಪಿಸಿದ ಪ್ರಧಾನಿ ಅವರನ್ನು ಸ್ಮರಿಸುತ್ತೇನೆ’ ಎಂದರು.
ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಪದಾಧಿಕಾರಿಗಳಾದ ಸೋಮಸುಂದರ್, ಎಂ.ಎ. ಮೋಹನ್, ಮಹೇಶ್‌ರಾಜೇ ಅರಸ್ ಪಾಲ್ಗೊಂಡಿದ್ದರು.
ಗಣರಾಜ್ಯೋತ್ಸವ ಪರೇಡ್‌ಗೆ ಆಹ್ವಾನಿತರಾಗಿರುವ ಮೈಸೂರಿನ ಸರಸ್ವತಿ ಎಂ. ಅವರನ್ನು ಶಾಸಕ ಟಿ.ಎಸ್. ಶ್ರೀವತ್ಸ ಹಾಗೂ ಬಿಜೆಪಿ ಮುಖಂಡರು ಶುಕ್ರವಾರ ಸನ್ಮಾನಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.