ಬೆಂಗಳೂರು: ‘ಬೆಟ್ಟ ಹಲಸೂರು ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ ಮುನಿರತ್ನ ಹಣ ನೀಡಿದರೆ, ಆ ನಿಲ್ದಾಣಕ್ಕೆ ಮುನಿರತ್ನ ಆ್ಯಂಡ್ ಕಂಪನಿ ಎಂದೇ ಹೆಸರಿಡಲು ಸಿದ್ಧ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಕಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಮುನಿರತ್ನ, ‘ಬೆಟ್ಟ ಹಲಸೂರು ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ ಎಂಬೆಸಿ ಸಂಸ್ಥೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಆ ನಿಲ್ದಾಣ ನಿರ್ಮಾಣ ಕೈಬಿಟ್ಟಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಶಿವಕುಮಾರ್, 'ಸಿಎಸ್ಆರ್ ನಿಧಿಯಿಂದ ಮೆಟ್ರೊ ನಿಲ್ದಾಣ ನಿರ್ಮಿಸಿದರೆ ಆ ನಿಲ್ದಾಣಕ್ಕೆ ನಿಧಿ ನೀಡಿದ ಕಂಪನಿಯ ಹೆಸರಿಡಲು ಅವಕಾಶ ಮಾಡಿಕೊಡುತ್ತೇವೆ. ಈ ಮಾದರಿಗೆ ಪ್ರಧಾನಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಅವರಿಗೆ ಸೇರಿದ 70-80 ಎಕರೆ ಜಮೀನು ಬೆಟ್ಟ ಹಲಸೂರು ನಿಲ್ದಾಣದ ಸಮೀಪವಿದೆ. ಅದಕ್ಕೆ ಅವರು ಈ ಪ್ರಶ್ನೆ ಎತ್ತಿದ್ದಾರೆ’ ಎಂದರು.
ಮಧ್ಯಪ್ರವೇಶಿಸಿದ ಮುನಿರತ್ನ, 'ಶಿವಕುಮಾರ್ ಅವರು ಬಿಲ್ಡರ್‌ಗೆ ಕರೆ ಮಾಡಿ ಹಣ ಕಟ್ಟುತ್ತೀಯಾ ಇಲ್ಲವಾ ಎಂದು ಕೇಳಿದ 24 ತಾಸಿನಲ್ಲಿ ಎಂಬೆಸಿ ಬಿಲ್ಡರ್‌ನವರು ಹಣ ಕಟ್ಟುತ್ತಾರೆ. ಶಿವಕುಮಾರ್ ಅವರ ಮಾತನ್ನಷ್ಟೇ ಬಿಲ್ಡರ್‌ಗಳು ಕೇಳುತ್ತಾರೆ’ ಎಂದರು.
ಅದಕ್ಕೆ ಶಿವಕುಮಾರ್, ‘ಆ ಭಾಗದಲ್ಲಿ ಎಂಬೆಸಿ ಅವರದ್ದು ಸುಮಾರು 250 ಎಕರೆ ಜಮೀನಿದೆ. ಅವರು ಮೆಟ್ರೊ ನಿಲ್ದಾಣಕ್ಕೆ ತಮ್ಮ ಹೆಸರು ಬರಬೇಕೆಂದು ಒಪ್ಪಂದ ಮಾಡಿಕೊಂಡಿದ್ದಾರೆ. ₹ 140 ಕೋಟಿ ಮೊತ್ತದಲ್ಲಿ ನಿರ್ಮಿಸಲಾಗುವ ಮೆಟ್ರೊ ನಿಲ್ದಾಣಕ್ಕೆ ₹ 120 ಕೋಟಿ ನೀಡುವುದಾಗಿ ಹೇಳಿದ್ದರು. ಅದರಲ್ಲಿ ಕೇವಲ ₹ 1 ಕೋಟಿ ನೀಡಿದ್ದಾರೆ’ ಎಂದರು.
ಆಗ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಎಂಬೆಸಿಯವರು ಬಾಕಿ ₹ 119 ಕೋಟಿ ನೀಡಲಿ ಎಂದು ಉಪಮುಖ್ಯಮಂತ್ರಿ ಅವರು ಧಮ್ಕಿ ಹಾಕಲಿ ಎಂದಷ್ಟೇ ಮುನಿರತ್ನ ಹೇಳುತ್ತಿದ್ದಾರೆ’ ಎಂದರು.
ಅದಕ್ಕೆ ಶಿವಕುಮಾರ್, ‘ನಾನೇಕೆ ಧಮ್ಕಿ ಹಾಕಲಿ? ಬೇಕಾದರೆ ಒಪ್ಪಂದ ರದ್ದು ಮಾಡೋಣ. ಮುನಿರತ್ನ ಹಣ ಕೊಟ್ಟರೆ ‘ಮುನಿರತ್ನ ಆ್ಯಂಡ್ ಕಂಪನಿ’ ಎಂದೇ ಹೆಸರಿಡೋಣ’ ಎಂದರು.
‘ಈ ಮೆಟ್ರೊ ನಿಲ್ದಾಣದ ಬಗ್ಗೆ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಕೂಡಾ ನನ್ನ ಜೊತೆ ಚರ್ಚಿಸಿದ್ದಾರೆ. ಕೃಷ್ಣ ಬೈರೇಗೌಡ ಅವರದ್ದು ಸಾರ್ವಜನಿಕ ಬೇಡಿಕೆ, ಮುನಿರತ್ನ ಅವರದ್ದು ಖಾಸಗಿ ಬೇಡಿಕೆ. ಇಷ್ಟೇ ವ್ಯತ್ಯಾಸ’ ಎಂದೂ ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.