ADVERTISEMENT

ಮುರಳೀಧರ ರಾವ್‌ ಬದಲಾವಣೆಗೆ ಒತ್ತಾಯ?

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 18:47 IST
Last Updated 14 ಡಿಸೆಂಬರ್ 2018, 18:47 IST

ಬೆಳಗಾವಿ: ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಅವರನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಪಕ್ಷದ ವಲಯದಲ್ಲಿ ಎದ್ದಿದೆ.

ರಾವ್‌ ಅವರು ಚುನಾವಣಾ ಸಮಯದಲ್ಲಷ್ಟೇ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಜ್ಯದ ನಾಯಕರ ಕೈಗೆ ಸಿಗುವುದಿಲ್ಲ. ಕೆಲವೇ ನಾಯಕರ ಮಾತಿಗೆ ಮಣೆ ಹಾಕುತ್ತಾರೆ ಎಂಬ ಆಕ್ಷೇಪಗಳು ಇವೆ.

ಚುನಾವಣೆಗೆ ಮುನ್ನವೇ ರಾವ್‌ ಅವರನ್ನು ಬದಲಿಸಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದರು. ಬಳಿಕ ಪ್ರಸ್ತಾಪ ಕೈಬಿಟ್ಟಿದ್ದರು. ರಾಜ್ಯ ಚುನಾವಣಾ ಉಸ್ತುವಾರಿಗಳನ್ನಾಗಿ ಕೇಂದ್ರ ಸಚಿವರಾದ ಪ್ರಕಾಶ ಜಾವಡೇಕರ್‌, ಪೀಯೂಷ್ ಗೋಯಲ್‌ ಅವರನ್ನು ನೇಮಕ ಮಾಡಲಾಗಿತ್ತು. ಚುನಾವಣಾ ರಣತಂತ್ರ ಹೆಣೆಯುವ ಹೊಣೆಯನ್ನು ಅವರಿಗೆ ವಹಿಸಲಾಗಿತ್ತು.

ADVERTISEMENT

ಇಷ್ಟೆಲ್ಲ ಕಸರತ್ತಿನ ನಂತರವೂ ಪಕ್ಷ ಗಳಿಸಿದ್ದು 104 ಸ್ಥಾನಗಳನ್ನಷ್ಟೇ. ಆ ಬಳಿಕ ಪಕ್ಷವನ್ನು ಅಧಿಕಾರದ ಚುಕ್ಕಾಣಿಗೆ ಏರಿಸುವಲ್ಲಿ ತಂತ್ರಗಾರಿಕೆ ರೂಪಿಸಲಿಲ್ಲ. ಕಳೆದ ಆರು ತಿಂಗಳಲ್ಲಿ ಎರಡು ಸಲವಷ್ಟೇ ರಾಜ್ಯಕ್ಕೆ ಬಂದು ಹೋಗಿದ್ದಾರೆ ಎಂಬುದು ಪಕ್ಷದ ಕೆಲವು ಮುಖಂಡರ ಆರೋಪ.

ತೆಲಂಗಾಣ ಉಸ್ತುವಾರಿ ಹೊಣೆ ಸಹ ಮುರಳೀಧರ ರಾವ್ ಅವರಿಗೆ ಇದೆ. ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕಳಪೆ ಸಾಧನೆ ಮಾಡಿದೆ. ಇದರ ಬೆನ್ನಲ್ಲೇ, ಉಸ್ತುವಾರಿ ಬದಲಾವಣೆಯ ಬೇಡಿಕೆ ಪಕ್ಷದೊಳಗೆ ಎದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.