ADVERTISEMENT

ಮುರುಘಾ ಮಠದಲ್ಲಿ ಅನಾಥ ಮಕ್ಕಳು ನಾಪತ್ತೆ ಸಾಧ್ಯತೆ: ಒಡನಾಡಿ

ಒಡನಾಡಿ ಸೇವಾ ಸಂಸ್ಥೆಯ ಎಂ.ಎಲ್‌.ಪರಶುರಾಮ್‌ ಕಳವಳ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 14:12 IST
Last Updated 21 ನವೆಂಬರ್ 2022, 14:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿತ್ರದುರ್ಗ: ಮುರುಘಾಮಠದಲ್ಲಿ ಆಶ್ರಯ ಪಡೆದಿದ್ದ 11 ಅನಾಥ ಮಕ್ಕಳ ಮಾಹಿತಿಯನ್ನು ಮರೆಮಾಚಲಾಗಿದ್ದು, ಆ ಎಲ್ಲ ಮಕ್ಕಳು ನಾಪತ್ತೆಯಾಗಿರುವ ಅನುಮಾನ ಕಾಡುತ್ತಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ಎಂ.ಎಲ್‌.ಪರಶುರಾಮ್‌ ಆರೋಪಿಸಿದರು.

‘ಮಠದಲ್ಲಿದ್ದ ಅನಾಥ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಿರುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಲಭ್ಯವಾಗಿಲ್ಲ. ಮಕ್ಕಳ ಕಲ್ಯಾಣ ಸಮಿತಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ. ಈ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿರುವ ಆತಂಕ ಕಾಡುತ್ತಿದೆ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಕಳವಳ ವ್ಯಕ್ತಪಡಿಸಿದರು.

‘ಮಠದಲ್ಲಿದ್ದ ಇನ್ನೂ ಹತ್ತು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ಬಗ್ಗೆ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ. ಈ ಸಂತ್ರಸ್ತರನ್ನು ಪತ್ತೆ ಮಾಡಿ ತನಿಖೆ ಮುಂದುವರಿಸುವ ಜವಾಬ್ದಾರಿ ಪೊಲೀಸರ ಮೇಲಿದೆ. ಆಗ ಮಾತ್ರ ಸಂತ್ರಸ್ತರಿಗೆ ನ್ಯಾಯ ಹಾಗೂ ಪರಿಹಾರ ಸಿಗಲು ಸಾಧ್ಯವಿದೆ. ಇದನ್ನು ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕೆ.ವಿ.ಸ್ಟ್ಯಾನ್ಲಿ ಮಾತನಾಡಿ, ‘ಪೋಕ್ಸೊ ಪ್ರಕರಣದ ಆರೋಪಿಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಒಡನಾಡಿ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯರ ತಾಯಿ ವಿರುದ್ಧ ದೂರು ದಾಖಲಿಸಲಾಗಿದೆ. ಮಕ್ಕಳನ್ನು ಪ್ರಚೋದಿಸಿದ ರೀತಿ ಪಿತೂರಿಯಂತೆ ಕಾಣುತ್ತಿದೆ. ಅನುಮಾನ ಸೃಷ್ಟಿಸಿ ಪ್ರಯೋಜನ ಪಡೆಯುವ ಹುನ್ನಾರ ಅಡಗಿದೆ’ ಎಂದು ದೂರಿದರು.

‘ಸಂತ್ರಸ್ತ ವಿದ್ಯಾರ್ಥಿನಿಯರ ತಾಯಿಯನ್ನು 12 ದಿನಗಳಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ವಾಧಾರ ಕೇಂದ್ರದಲ್ಲಿಟ್ಟಿರುವ ರೀತಿ ಸಂತ್ರಸ್ತ ವಿದ್ಯಾರ್ಥಿನಿಯರಲ್ಲಿ ಭೀತಿ ಸೃಷ್ಟಿಸಿದೆ. ಅಭದ್ರತೆ, ಆತಂಕ ಅವರನ್ನು ಕಾಡುತ್ತಿದೆ’ ಎಂದರು.


ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

ಪ್ರೌಢಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರ ನ್ಯಾಯಾಂಗ ಬಂಧನದ ಅವಧಿ ನ.25ರವರೆಗೆ ವಿಸ್ತರಣೆಯಾಗಿದೆ.
ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಂಡಿದ್ದರಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಆರೋಪಿಗಳನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಶಿವಮೂರ್ತಿ ಶರಣರು, ಹಾಸ್ಟೆಲ್‌ ವಾರ್ಡನ್‌ ಹಾಗೂ ಮಠದ ವ್ಯವಸ್ಥಾಪಕ ಪರಮಶಿವಯ್ಯ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಧೀಶೆ ಬಿ.ಕೆ.ಕೋಮಲಾ ವಿಸ್ತರಿಸಿದರು.

ಜಾಮೀನು ಅರ್ಜಿ ವಿಚಾರಣೆ

ಶಿವಮೂರ್ತಿ ಶರಣರ ವಿರುದ್ಧ ದೂರು ದಾಖಲಿಸುವಂತೆ ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ನಡೆಯಿತು.
2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಆರೋಪಿ ಪರ ವಕೀಲರು ಜಾಮೀನು ಕೋರಿ ವಾದ ಮಂಡಿಸಿದರು. ಪ್ರತಿವಾದಕ್ಕೆ ಕಾಲಾವಕಾಶ ನೀಡಿದ ನ್ಯಾಯಾಧೀಶರು ವಿಚಾರಣೆಯನ್ನು ನ.24ಕ್ಕೆ ಮುಂದೂಡಿದರು.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಬಸವರಾಜನ್‌ ಪತ್ನಿ ಸೌಭಾಗ್ಯ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಕರಾರು ಸಲ್ಲಿಕೆಗೆ ಸರ್ಕಾರಿ ವಕೀಲರಿಗೆ ನ.22ಕ್ಕೆ ಕಾಲಾವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.