ADVERTISEMENT

ಭಕ್ತಿ ಭಾವದ ಉರುಸ್‌ ಮೆರವಣಿಗೆ

ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ: ಪೊಲೀಸ್‌ ಬಿಗಿಭದ್ರತೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 19:53 IST
Last Updated 9 ಮಾರ್ಚ್ 2023, 19:53 IST
ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್‌ಗಿರಿಯಲ್ಲಿ ಗುರುವಾರ ಉರುಸ್‌ ಮೆರವಣಿಗೆ ನಡೆಯಿತು
ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್‌ಗಿರಿಯಲ್ಲಿ ಗುರುವಾರ ಉರುಸ್‌ ಮೆರವಣಿಗೆ ನಡೆಯಿತು   

ಚಿಕ್ಕಮಗಳೂರು: ತಾಲ್ಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಗುರುವಾರ ಉರುಸ್‌ ಮೆರವಣಿಗೆ ನಡೆಯಿತು. ವಿವಿಧೆಡೆಯ ಭಕ್ತರು, ಫಕೀರರು ಪಾಲ್ಗೊಂಡಿದ್ದರು.

ಈ ಬಾರಿ ಶಾಖಾದ್ರಿ ಸಯ್ಯದ್‌ ಗೌಸ್‌ ಮೊಹಿಯುದ್ದಿನ್‌ ಅವರು ಗುಹೆಯೊಳಗೆ ತೆರಳಿ ಗೋರಿ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿದರು.

ಗಂಧವನ್ನು ಅತ್ತಿಗುಂಡಿಯಿಂದ ಮೆರವಣಿಗೆಯಲ್ಲಿ ಬಾಬಾಬುಡನ್‌ಗಿರಿಗೆ ಸಂಜೆ ತರಲಾಯಿತು. ಮೆರವಣಿಗೆಯದ್ದಕ್ಕೂ ಭಕ್ತರು ಗೀತೆಗಳನ್ನು ಹಾಡಿದರು. ಗಿರಿಯಲ್ಲಿ ಶಾಖಾದ್ರಿ ಅವರು ಗಂಧವನ್ನು ಸ್ವಾಗತಿಸಿದರು. ಗಂಧವು ದರ್ಗಾದ ಗೇಟಿನ ಮುಂಭಾಗಕ್ಕೆ ತಲುಪುತ್ತಿದ್ದಂತೆ ಭಕ್ತರು ನಾಣ್ಯಗಳನ್ನು ಚಿಮ್ಮಿ ಹರಕೆ ಸಲ್ಲಿಸಿದರು.

ADVERTISEMENT

ಭಕ್ತರು ದರ್ಗಾ ಗೇಟಿನ ಬಳಿ ನಿಂತು ಮೆರವಣಿಗೆ ಕಣ್ತುಂಬಿಕೊಂಡರು.

*
ಉರುಸ್‌ ಆಚರಣೆ ವೇಳೆ ಗುಹೆಯೊಳಕ್ಕೆ ದರ್ಶನಕ್ಕೆ ತೆರಳದೆ 10 ವರ್ಷ ಆಗಿತ್ತು. ಈ ಬಾರಿ ಅವಕಾಶ ಕಲ್ಪಿಸಿದರು. ಗೋರಿ ದರ್ಶನ, ಹೂವು ಅರ್ಪಣೆಗೆ ಮಾತ್ರ ಅನುಮತಿ ನೀಡಿದರು. ಗಂಧ ಲೇಪನ, ಸಾಂಪ್ರದಾಯಿಕ ವಿಧಿ ನೆರವೇರಿಸಲು ಅವಕಾಶ ನೀಡಿಲ್ಲ.
-ಸಯ್ಯದ್‌ ಗೌಸ್‌ ಮೊಹಿಯುದ್ದಿನ್‌, ಶಾಖಾದ್ರಿ

*
ಗುಹೆಯೊಳಕ್ಕೆ ತೆರಳಿ ದರ್ಶನ ಮಾಡಲು ಎಲ್ಲ ಸಾರ್ವಜನಿಕರಿಗೂ ಅವಕಾಶ ಇದೆ. ಅದರಂತೆ ಶಾಖಾದ್ರಿ ಅವರು ತೆರಳಿ ದರ್ಶನ ಮಾಡಿದ್ದಾರೆ. ಆದರೆ, ಗಂಧ ಒಯ್ಯಲು, ಲೇಪಿಸಲು ಅವಕಾಶ ಇಲ್ಲ.
-ಎಚ್‌.ಡಿ.ರಾಜೇಶ್‌, ಉಪವಿಭಾಗಾಧಿಕಾರಿ, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.