ADVERTISEMENT

ಸರ್ಕಾರದ ತಾರತಮ್ಯ ಧೋರಣೆಗೆ ಆಕ್ರೋಶ: ಶಾಂತಿ ಸಭೆ ಬಹಿಷ್ಕರಿಸಿದ ಮುಸ್ಲಿಂ ನಾಯಕರು

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 10:20 IST
Last Updated 30 ಜುಲೈ 2022, 10:20 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ ಶನಿವಾರ ಏರ್ಪಡಿಸಿದ್ದ ಶಾಂತಿ ಸಭೆಯನ್ನು ಮುಸ್ಲಿಂ ಸಮುದಾಯದ ಮುಖಂಡರು ಬಹಿಷ್ಕರಿಸಿದರು. ‘ರಾಜ್ಯ ಸರ್ಕಾರ ಒಂದು ಕೋಮಿನ ಪರವಾಗಿ ಕೆಲಸ ಮಾಡುತ್ತಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕ್ರಮಕೈಗೊಳ್ಳುತ್ತಿದೆ. ಹಾಗಾಗಿ ಜಿಲ್ಲಾಡಳಿತ ನಡೆಸುವ ಶಾಂತಿ ಸಭೆಯಲ್ಲಿ ಭಾಗವಹಿಸುವುದರಲ್ಲಿ ಅರ್ಥವಿಲ್ಲ’ ಎಂದು ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದ್ದಾರೆ.

‘ಸರ್ಕಾರ ಎಂದರೆ ಸಮಾನತೆ.ಸರ್ಕಾರ ಯಾವತ್ತೂ ಒಂದು ಸಮುದಾಯದ ಪರವಾಗಿ ನಡೆದುಕೊಳ್ಳಬಾರದು. ಈಗ ರಾಜ್ಯದಲ್ಲಿ ಸಮಾನತೆ ಇಲ್ಲ. ಒಂದು ಪಕ್ಷಕ್ಕೆ ಸೀಮಿತವಾದ ಸರ್ಕಾರ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹತ್ಯೆಯಾದ ಪ್ರವೀಣ್‌ ನೆಟ್ಟಾರು ಅವರ ಮನೆಗೆ ಗುರುವಾರ ಭೇಟಿ ನೀಡಿದರು. ತಾನು ಬಂದಿದ್ದು ಸರ್ಕಾರದ ಪರವಾಗಿ ಅಲ್ಲ, ಬಿಜೆಪಿ ಪರವಾಗಿ ಎಂಬಂತೆ ಅವರು ನಡೆದುಕೊಂಡಿದ್ದಾರೆ. ಪ್ರವೀಣ್‌ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿಯವರು, ಅಲ್ಲೇ ಸಮೀಪದ ಕಳೆಂಜ ಗ್ರಾಮದ ಮಸೂದ್ ಮನೆಗೂ ಭೇಟಿ ನೀಡಬಹುದಿತ್ತು. ಇಂತಹ ತಾರತಮ್ಯವನ್ನು ಖಂಡಿಸಿ ಮುಸ್ಲಿಂ ಸಮುದಾಯ ಶಾಂತಿ ಸಭೆಯನ್ನು ಬಹಿಷ್ಕರಿಸಿದೆ’ ಎಂದು ದಕ್ಷಿಣ ಕನ್ನಡ– ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್‌ ಕಮಿಟಿ ಉಪಾಧ್ಯಕ್ಷ ಬಿ.ಎಂ.ಮಮ್ತಾಜ್‌ ಆಲಿ, ಕೃಷ್ಣಾಪುರ ಆರೋಪಿಸಿದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಜೀವಗಳು ಒಂದು ವಾರದಲ್ಲಿ ಬಲಿಯಾಗಿವೆ. ಈ ಬಗ್ಗೆ ಸಾರ್ವಜನಿಕರಲ್ಲಿ ನೋವು ಇದೆ. ಜಿಲ್ಲೆಯಲ್ಲಿ ಹತ್ಯೆಗೊಳಗಾದ ಯುವಕರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲೂ ತಾರತಮ್ಯ ನಡೆಸಲಾಗಿದೆ. ಹತ್ಯೆಗೊಳಗಾದ ಮುಸ್ಲಿಂ ಸಮುದಾಯದ ಯುವಕರ ಕುಟುಂಬದವರಿಗೆ ಪರಿಹಾರ ನೀಡಿಲ್ಲ. ಮುಖ್ಯಮಂತ್ರಿಯವರು ಪಕ್ಷದಿಂದ ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಪರಿಹಾರ ನೀಡಿದ್ದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಸರ್ಕಾರದಿಂದ ಪರಿಹಾರ ನೀಡುವಾಗ ಎಲ್ಲ ಸಮುದಾಯಗಳನ್ನು ಸಮಾನವಾಗಿ ನಡೆಸಿಕೊಳ್ಳಬೇಕಲ್ಲವೇ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಮಸ್ಲಿಂ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಸೀದಿಗಳಲ್ಲಿ ಚರ್ಚಿಸಿದ್ದೇವೆ. ಸರ್ಕಾರ ಮೊದಲು ಸಮಾನತೆಗೆ ಆದ್ಯತೆ ನೀಡಲಿ. ಆ ಬಳಿಕ ಬೇಕಿದ್ದರೆ ಶಾಂತಿ ಸಭೆ ಕರೆಯಲಿ ಎಂಬ ಅಭಿಪ್ರಾಯ ಮಸೀದಿಗಳಲ್ಲಿ ನಡೆದ ಚರ್ಚೆಯಲ್ಲಿ ವ್ಯಕ್ತವಾಗಿದೆ. ಹಾಗಾಗಿ ಮುಸ್ಲಿಂ ಸಮುದಾಯದ ಮುಖಂಡರು ಇವತ್ತಿನ ಶಾಂತಿ ಸಭೆಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತೋರಿಕೆಯ ಶಾಂತಿ ಸಭೆ: ಮುಸ್ಲಿಂ ಒಕ್ಕೂಟ ಆರೋಪ

‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ‘ ಎಂದು ಗೃಹಸಚಿವರಾಗಿದ್ದಾಗ ಹೇಳಿಕೆ ನೀಡಿದ್ದ ಬಸವರಾಜ ಬೊಮ್ಮಾಯಿ ಅವರು, ಮುಖ್ಯಮಂತ್ರಿಯಾದ ಬಳಿಕವೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆಗಳಿಗೆ ಸ್ಪಂದಿಸುವ ವಿಚಾರದಲ್ಲೂ ಅನ್ಯಾಯವನ್ನು ಎಸಗಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಲು ಭೇಟಿ ನೀಡುವಾಗಲೂ ಸತ್ತವರ ಧರ್ಮವನ್ನು ನೋಡಿದ್ದಾರೆ’ ಎಂದುದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ಆರೋಪಿಸಿದೆ.

‘ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾದಾಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆಯನ್ನು ಕರೆದು ಪರಿಸ್ಥಿತಿಗೆ ತೇಪೆ ಹಾಕುವ ಪ್ರಯತ್ನ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಗುರುವಾರ ಭೇಟಿ ನೀಡಿದ ಸಂಧರ್ಭದಲ್ಲೇ ಮುಖ್ಯಮಂತ್ರಿಯವರು ಶಾಂತಿ ಸಭೆ ಕರೆದು ಪರಿಸ್ಥಿತಿಯ ಗಂಭೀರತೆ ಬಗ್ಗೆ ಚರ್ಚಿಸ ಬಹುದಿತ್ತು. ತೋರಿಕೆಗಾಗಿ ಶಾಂತಿ ಸಭೆ ನಡೆಸುವ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿರುವುದು ಬೇಸರದ ವಿಷಯ. ಇಂತಹ ಶಾಂತಿ ಸಭೆಯ ಬಗ್ಗೆ ಜನರು ವಿವೇಚಿಸಿ ಸ್ಪಂದಿಸಬೇಕು‘ ಎಂದು ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.