ADVERTISEMENT

ಹನುಮ ದೇಗುಲಕ್ಕೆ ಕನಿಷ್ಠ ₹ 30 ಲಕ್ಷ ಬೆಲೆ ಬಾಳುವ ಜಾಗ ನೀಡಿದ ಬಾಷಾ

ಹೆದ್ದಾರಿಯ ಬಳಿಯೇ ಇರುವ ಜಾಗ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 19:31 IST
Last Updated 6 ಡಿಸೆಂಬರ್ 2020, 19:31 IST
ನೂತನ ದೇಗುಲಕ್ಕೆ ಅಡಿಪಾಯ ಹಾಕಲಾಗುತ್ತಿದೆ
ನೂತನ ದೇಗುಲಕ್ಕೆ ಅಡಿಪಾಯ ಹಾಕಲಾಗುತ್ತಿದೆ   
""

ಬೆಂಗಳೂರು: ಹನುಮ ದೇಗುಲ ನಿರ್ಮಾಣಕ್ಕೆ ಮುಸ್ಲಿಮ
ರೊಬ್ಬರು ಒಂದೂವರೆ ಗುಂಟೆ (1,633 ಚದರ ಅಡಿ) ಜಾಗವನ್ನು ದಾನವಾಗಿ ನೀಡಿದ್ದಾರೆ. ಹೆದ್ದಾರಿಯ ಬಳಿಯೇ ಇರುವ ಈ ಜಾಗ ಕನಿಷ್ಠ ₹ 30 ಲಕ್ಷ ಬೆಲೆ ಬಾಳುತ್ತದೆ.

ನಗರದ ವೈಟ್‌ಫೀಲ್ಡ್‌ ನಿವಾಸಿ, ಲಾರಿ ಉದ್ಯಮಿ ಎಚ್.ಎಂ.ಜಿ. ಬಾಷಾ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ವಳಗೆರೆಪುರ–ಮೈಲಾಪುರ ಗೇಟ್‌ ಬಳಿ ನಿರ್ಮಾಣವಾಗುತ್ತಿರುವ ಆಂಜನೇಯ ದೇವಸ್ಥಾನಕ್ಕೆ ಜಾಗವನ್ನು ನೀಡಿದ್ದಾರೆ. ಇದರ ಮಾಲೀಕತ್ವವನ್ನು ಶ್ರೀವೀರಾಂಜನೇಯ ಸ್ವಾಮಿ ದೇವಾಲಯ ಸೇವಾ ಟ್ರಸ್ಟ್‌ಗೆ ವರ್ಗಾವಣೆ ಮಾಡಿದ್ದಾರೆ.

ವಳಗೆರೆಪುರದಲ್ಲಿ ಸುಮಾರು 50 ವರ್ಷಗಳ ಹಿಂದೆ ಸಣ್ಣ ಗುಡಿಯಲ್ಲಿ ಆಂಜನೇಯಸ್ವಾಮಿ ಮೂರ್ತಿ
ಪ್ರತಿಷ್ಠಾಪಿಸಲಾಗಿತ್ತು. ಈ ಗುಡಿಗೆ ಹೊಂದಿಕೊಂಡಂತೆಯೇ ಬಾಷಾ ಅವರಿಗೆ ಸೇರಿದ ಮೂರು ಎಕರೆ ಜಮೀನು ಇದೆ. ರಸ್ತೆಯ ಜಾಗದಲ್ಲಿ ಈ ಗುಡಿ ಕಟ್ಟಿದ್ದರಿಂದ, ಇದನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಗೆ ಹೇಳಲಾಗಿತ್ತು. ಈಗ ಗುಡಿ ಇರುವ ಜಾಗದಿಂದ ಸ್ವಲ್ಪ ಹಿಂದೆ ಈ ದೇಗುಲ ನಿರ್ಮಾಣ ಮಾಡಲು ಮುಂದಾಗಿದ್ದ ಗ್ರಾಮಸ್ಥರು ಇದಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿದ್ದರು.

ADVERTISEMENT

‘ಸಣ್ಣ ಗುಡಿ ಇದ್ದಾಗ ದೇವರ ಮೂರ್ತಿಯ ಸುತ್ತ ಪ್ರದಕ್ಷಿಣೆ ಹಾಕಲು ಗ್ರಾಮಸ್ಥರಿಗೆ ಕಷ್ಟವಾಗುತ್ತಿರುವುದನ್ನು ಗಮನಿಸಿದ್ದೆ. ಜೀರ್ಣೋದ್ಧಾರದ ಸಂದರ್ಭದಲ್ಲಿ ಸ್ವಲ್ಪ ದೊಡ್ಡದಾಗಿ ದೇಗುಲ ನಿರ್ಮಾಣ ಮಾಡಲು ನಿರ್ಧರಿಸಿದ್ದಾಗಿ ಗ್ರಾಮಸ್ಥರು ಹೇಳಿದರು. ಒಂದು ಗುಂಟೆ ಕೇಳಿದ್ದರು. ಆದರೆ, ಅಷ್ಟು ಸಾಕಾಗುವುದಿಲ್ಲ ಎಂದುಕೊಂಡು ಇರುವ ಜಮೀನಿನಲ್ಲಿಯೇ ಒಂದೂವರೆ ಗುಂಟೆಯಷ್ಟು ಜಾಗವನ್ನು ನೀಡಿದ್ದೇನೆ’ ಎಂದು ಎಚ್.ಎಂ.ಜಿ. ಬಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂಟು ತಿಂಗಳಿನಿಂದ ದೇಗುಲದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದೆ. ಜಾಗ ಸಾಕಾಗದಿದ್ದರೆ ಇನ್ನೂ ಅರ್ಧ ಗುಂಟೆ ಜಮೀನು ನೀಡುತ್ತೇನೆ. ದೇಗುಲ ನಿರ್ಮಾಣಕ್ಕೆ ಧನ ಸಹಾಯವನ್ನೂ ಮಾಡುತ್ತೇನೆ ಎಂದೂ ಬಾಷಾ ಭರವಸೆ ನೀಡಿದ್ದಾರೆ. ಈಗಾಗಲೇ ಹೊಸ ದೇಗುಲಕ್ಕೆ ಅಡಿಪಾಯ ಹಾಕಲಾಗಿದ್ದು, ದೇಗುಲದ ಗೋಡೆಗಳ ನಿರ್ಮಾಣ ಕಾರ್ಯ ಜ. 15ರಿಂದ ಆರಂಭಿಸಲಾಗುವುದು’ ಎಂದು ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ಸೇವಾ
ಟ್ರಸ್ಟ್‌ನ ಅಧ್ಯಕ್ಷ ಎಂ.ಡಿ. ಬೈರೇಗೌಡ ಹೇಳಿದರು.

‘ಹಿಂದೆ–ಮುಂದೆ ಯೋಚನೆ ಮಾಡದೆ ದೇಗುಲಕ್ಕೆ ಇಷ್ಟು ಜಾಗವನ್ನು ನೀಡಿದ್ದಾರೆ. ಅವರನ್ನು ಅಭಿನಂದಿಸುವ ಉದ್ದೇಶದಿಂದ ಗ್ರಾಮದಲ್ಲಿ ಬ್ಯಾನರ್‌ ಹಾಕಲಾಗಿತ್ತು. ಇದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕೋಮು ಸೌಹಾರ್ದಕ್ಕೆ ನಮ್ಮ ಗ್ರಾಮ ಸಾಕ್ಷಿಯಾಗಿದೆ’ ಎಂದು ವಳಗೆರೆಪುರ–ಮೈಲಾಪುರ ಗ್ರಾಮಸ್ಥರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.