ADVERTISEMENT

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ವಿಶ್ವನಾಥ್ ಮನೆ ಸ್ವಚ್ಛಗೊಳಿಸಿದ ಮುಸ್ಲಿಂ ಯುವಕರು

ಕೋಮುದ್ವೇಷದಿಂದ ಏಳು ವರ್ಷಗಳ ಹಿಂದೆ ಹತ್ಯೆಯಾಗಿದ್ದ ಬಜರಂಗದಳದ ಕಾರ್ಯಕರ್ತ

ಚಂದ್ರಹಾಸ ಹಿರೇಮಳಲಿ
Published 1 ಮಾರ್ಚ್ 2022, 1:16 IST
Last Updated 1 ಮಾರ್ಚ್ 2022, 1:16 IST
ವಿಶ್ವನಾಥ್‌ ಅವರ ಮನೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಜಬೀಉಲ್ಲಾ ಅವರ ತಂಡ
ವಿಶ್ವನಾಥ್‌ ಅವರ ಮನೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಜಬೀಉಲ್ಲಾ ಅವರ ತಂಡ   

ಶಿವಮೊಗ್ಗ: ತೀರ್ಥಹಳ್ಳಿ ರಸ್ತೆಯ ಗಾಜನೂರು ಬಳಿ 2015ರಲ್ಲಿ ಕೋಮುದ್ವೇಷಕ್ಕೆ ಜೀವ ಕಳೆದುಕೊಂಡ ಬಜರಂಗದಳದ ಕಾರ್ಯಕರ್ತ ವಿಶ್ವನಾಥ್‌ ಶೆಟ್ಟಿ ಅವರ ಆಲ್ಕೊಳದ ಪಾಳುಬಿದ್ದ ಮನೆಯನ್ನು ಸೋಮವಾರ ಮುಸ್ಲಿಂ ಯುವಕರು ಸ್ವಚ್ಛಗೊಳಿಸಿದರು.

ಏಳು ವರ್ಷಗಳ ಹಿಂದೆ ನಗರದಲ್ಲಿ ನಡೆದ ಪಿಎಫ್ಐ ಸಂಸ್ಥಾಪನಾ ದಿನದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಒಂದು ಗುಂಪು ವಿಶ್ವನಾಥ್‌ ಶೆಟ್ಟಿ ಅವರನ್ನು ಹತ್ಯೆ ಮಾಡಿತ್ತು. ಎರಡು ವರ್ಷಗಳ ಹಿಂದೆ ಅವರ ತಂದೆ ವಸಂತಶೆಟ್ಟಿ ಮೂಳೆ ಕ್ಯಾನ್ಸರ್‌ನಿಂದ ಮೃತಪಟ್ಟ ಬಳಿಕ ತಾಯಿ ಮೀನಾಕ್ಷಿ ಅವರು ಚಿಂದಿ ಆಯ್ದು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬಂದ ಹಣದಲ್ಲಿ ಒಬ್ಬನೇ ಮೊಮ್ಮಗನನ್ನು (ವಿಶ್ವನಾಥ್‌ ಅವರ ಪುತ್ರ) ಓದಿಸಲು ಹೆಣಗಾಡುತ್ತಿದ್ದಾರೆ. ವಿಧವಾ ವೇತನಕ್ಕಾಗಿ ಅಲೆದಾಡುತ್ತಿದ್ದಾರೆ.

ನಗರದ ಸಾಗರ ರಸ್ತೆಯ ಆಲ್ಕೊಳ, ನಂದಿನಿ ಬಡಾವಣೆಯ 5ನೇ ತಿರುವಿನಲ್ಲಿರುವ ಅವರ ಮನೆ ಪಾಳು ಬಿದ್ದಿದೆ. ಕಾಂಪೌಂಡ್‌ ಹೊರಗೆ ಕಸದ ರಾಶಿ ಇದೆ. ಪುಟ್ಟ ಮನೆಯ ಸಿಮೆಂಟ್‌ ಶೀಟ್‌ಗಳ ಮೇಲೆ ಅರ್ಧ ಅಡಿಯಷ್ಟು ಮಣ್ಣು ಕೂತಿದೆ. ಮನೆಯ ಬಾಗಿಲುಗಳನ್ನು ಗೆದ್ದಲು ತಿಂದಿದೆ. ಮೀನಾಕ್ಷಮ್ಮ ಚಿಂದಿ ಆಯ್ದು ಸಂಕಷ್ಟದ ಜೀವನ ನಡೆಸುತ್ತಿರುವ ಕುರಿತು ಫೆ.27ರ ಸಂಚಿಕೆಯಲ್ಲಿ ‘ಪ್ರಜಾವಾಣಿ’
ಯಲ್ಲಿ ಪ್ರಕಟವಾದ ವರದಿ ನೋಡಿದ ವಿದ್ಯಾನಗರದ ಯುವಕ ಜಬೀಉಲ್ಲಾ ಅವರು ಜೆಡಿಎಸ್‌ ಮುಖಂಡ ಎಂ. ಶ್ರೀಕಾಂತ್‌ ಅವರನ್ನು ಸಂಪರ್ಕಿಸಿ, ತಮ್ಮ ತಂಡದೊಂದಿಗೆ ಬಂದು ಮನೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

ಹೊಸ ಚಪ್ಪಲಿ ನೋಡಿ ಕಣ್ಣೀರಾದರು...

ಆಲ್ಕೊಳದ ಮೀನಾಕ್ಷಮ್ಮ ಅವರ ಮನೆಗೆ ಸೋಮವಾರ ಬಂದ ದಾನಿಯೊಬ್ಬರು ಬರಿಗಾಲಲ್ಲಿ ಇದ್ದ ಅವರನ್ನು ನೋಡಿ ಹೊಸ ಚಪ್ಪಲಿ ತಂದುಕೊಟ್ಟಿದ್ದಾರೆ. ಅದನ್ನು ತೋರಿಸಿ ಮೀನಾಕ್ಷಮ್ಮ ಕಣ್ಣೀರು ಸುರಿಸಿದರು. ‘ಪತಿ ಇದ್ದಾಗ ಕೊಡಿಸಿದ್ದ ಚಪ್ಪಲಿ ಸವೆದು ಹೋಗಿತ್ತು. ಚಿಂದಿ ಆಯುವ ನನಗೆ ಚಪ್ಪಲಿ ಕೊಳ್ಳಲೂ ಹಣ ಇರಲಿಲ್ಲ. ಯಾರೋ ಬಂದು ಹೊಸ ಚಪ್ಪಲಿ ಕೊಟ್ಟರು. ಕಣ್ಣೀರು ಹೇಗೆ ತಡೆಯಲಿ’ ಎಂದು ಗದ್ಗದಿತರಾದರು.

‘ನಗರದ ಶ್ಯಾಮ್‌ ಅವರ ಬಳಿ ಕೆಲಸ ಮಾಡುತ್ತಿರುವೆ. ಮನೆಗಳಿಗೆ ಬಣ್ಣ ಬಳಿಯುವ ಕಾಯಕದಿಂದಲೇ ಜೀವನ ಸಾಗಿಸುತ್ತಿರುವೆ. ಇಲ್ಲಿಗೆ ಬಂದು ಮನೆಯನ್ನು ನೋಡಿದೆ. ಮನೆಯ ಮೇಲೆ, ಒಳಗೆ ಸಾಕಷ್ಟು ಮಣ್ಣು ಕೂತಿದೆ. ಸ್ವಚ್ಛಗೊಳಿಸದೆ ಎರಡು ವರ್ಷಗಳಾಗಿವೆ. ಮನೆಯ ಚಾವಣಿ ಮೇಲೆ ಸಂಗ್ರಹವಾಗಿರುವ ದೂಳನ್ನು ಸಚ್ಛಗೊಳಿಸುತ್ತಿದ್ದೇವೆ. ಮೀನಾಕ್ಷಮ್ಮ ಅವರ ಸ್ಥಿತಿ ನೋಡಿ ಮರುಕ ಬರುತ್ತದೆ. ಜಾತಿ, ಧರ್ಮ ಯಾವುದೇ ಇರಲಿ; ಮನುಷ್ಯತ್ವ ಮುಖ್ಯ’ ಎಂದು ಜಬೀಉಲ್ಲಾ ಹೇಳುತ್ತಾರೆ.

ಶಿಕ್ಷಣಕ್ಕೆ ನೆರವು ನೀಡಿದ ನಟ ಪ್ರಥಮ್‌: ನಟ ಪ್ರಥಮ್‌, ಧ್ರುವ ಸರ್ಜಾ, ಮತ್ತಿತರ ಕಲಾವಿದರು ₹ 50 ಸಾವಿರ ಠೇವಣಿ ಹಣವನ್ನುವಿಶ್ವನಾಥ ಶೆಟ್ಟಿ ಅವರ ಪುತ್ರ ಆದಿತ್ಯನ ವಿದ್ಯಾಭ್ಯಾಸಕ್ಕೆ ನೀಡಿದ್ದಾರೆ. ಎಂ.ಶ್ರೀಕಾಂತ್ ಅವರು ಮನೆಗೆ ವಿದ್ಯುತ್, ನಲ್ಲಿ ಸಂಕರ್ಪ ಕಲ್ಪಿಸಿಕೊಟ್ಟಿದ್ದಾರೆ. ಸ್ವಚ್ಛತಾ ಕಾರ್ಯಕ್ಕೆ ನೆರವಾಗಿದ್ದಾರೆ. ಕರವೇ ಯುವ ಸೇನೆ ಅಧ್ಯಕ್ಷ ಕಿರಣ್‌ಕುಮಾರ್ ಅಡುಗೆ ಅನಿಲ ಸಂಪರ್ಕ, ದಿನಸಿ ಕೊಡಿಸಿದ್ದಾರೆ. ತಮ್ಮ ಪರಿಚಯವನ್ನೇ ಮಾಡಿಕೊಳ್ಳದ ದಾನಿಯೊಬ್ಬರು ಅವರ ಮನೆಗೆ ಬಂದು ಮೀನಾಕ್ಷಮ್ಮ ಅವರಿಗೆ ₹10 ಸಾವಿರ ನಗದು ನೀಡಿ ಹೋಗಿದ್ದಾರೆ.

ಬ್ಯಾಂಕ್‌ ಖಾತೆ ವಿವರ

ಮೀನಾಕ್ಷಮ್ಮ ಅವರ ಉಳಿತಾಯ ಖಾತೆ ಸಂಖ್ಯೆ: 110036146286, ಕೆನರಾ ಬ್ಯಾಂಕ್‌, ಎಪಿಎಂಸಿ ಶಾಖೆ, ಶಿವಮೊಗ್ಗ

ಐಎಫ್‌ಎಸ್‌ಸಿ ಕೋಡ್‌: ಸಿಎನ್‌ಆರ್‌ಬಿ0003066, ಎಂಐಸಿಆರ್ ಕೋಡ್‌: 577015203

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.