ADVERTISEMENT

ಚಿಕ್ಕೋಡಿ: ಹಿಂದೂ ವಿಧಾನದಂತೆ ಮುಸ್ಲಿಮರಿಂದ ಎತ್ತಿನ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 23:30 IST
Last Updated 6 ಜೂನ್ 2025, 23:30 IST
ಚಿಕ್ಕೋಡಿಯ ರೈತ ತಾಜುದ್ದೀನ್ ಜಾಡವಾಲೆ ಅವರು ಸಾಕಿದ ‘ಹನುಮ’ ಎತ್ತನ್ನು ಶುಕ್ರವಾರ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು
ಚಿಕ್ಕೋಡಿಯ ರೈತ ತಾಜುದ್ದೀನ್ ಜಾಡವಾಲೆ ಅವರು ಸಾಕಿದ ‘ಹನುಮ’ ಎತ್ತನ್ನು ಶುಕ್ರವಾರ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು   

ಚಿಕ್ಕೋಡಿ: ಇಲ್ಲಿನ ಹಾಲಟ್ಟಿ ಬಡಾವಣೆಯ ರೈತ ತಾಜುದ್ದೀನ್ ಜಾಡವಾಲೆ ಅವರ ‘ಹನುಮ’ ಎಂಬ ಎತ್ತು ಶುಕ್ರವಾರ ಮೃತಪಟ್ಟಿದ್ದು, ಅದಕ್ಕೆ ಗೌರವಪೂರ್ವಕವಾಗಿ ಹಿಂದೂ ಸಂಪ್ರದಾಯದಂತೆ ಸಕಲ ವಿಧಿ–ವಿಧಾನ ಅನುಸರಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

22 ವರ್ಷಗಳ ಹಿಂದೆ ಮಹಾರಾಷ್ಟ್ರದ ಕರಸುಂಡಿ ಗ್ರಾಮದಿಂದ ತಾಜುದ್ದೀನ್‌ ಅವರು ಎರಡು ಹೋರಿ ಕರುಗಳನ್ನು ಖರೀದಿಸಿದ್ದರು. ಒಂದಕ್ಕೆ ರಾಜಾ, ಇನ್ನೊಂದಕ್ಕೆ ಹನುಮ ಎಂದು ಹೆಸರಿಟ್ಟಿದ್ದರು. ಅವುಗಳ ನೆರವಿನಿಂದ ಐದೂವರೆ ಎಕರೆ ಜಮೀನಿಲ್ಲಿ ಕೃಷಿ ಮಾಡುತ್ತಿದ್ದರು.

2022ರ ಸೆಪ್ಟೆಂಬರ್‌ನಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟ ರಾಜಾ ಎತ್ತಿಗೂ ಹಿಂದೂ ಸಂಪ್ರದಾಯದಂತೆ ತಮ್ಮ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಈಗ ಸಾವನ್ನಪ್ಪಿದ ಹನುಮ ಎತ್ತಿಗೂ ರಾಜಾ ಪಕ್ಕದಲ್ಲೇ ಮಣ್ಣು ಮಾಡಿದರು.

ADVERTISEMENT

ಮಕ್ಕಳಂತೆ ಸಾಕಿದ್ದ ಪ್ರೀತಿಯ ಎತ್ತುಗಳನ್ನು ನೆನೆದು ತಾಜುದ್ದೀನ್ ಅವರ ತಾಯಿ ಲಾಲಬಿ, ಪತ್ನಿ ಮೊಹಬ್ಬತ್, ಮಕ್ಕಳಾದ ತಂಜಿಲಾ, ತನ್ವೀರಾ, ಇಬ್ರಾಹಿಂ ಕಣ್ಣೀರು ಹಾಕಿದರು. ಪೂಜೆ ಸಲ್ಲಿಸಿ, ಆರತಿ ಮಾಡಿ, ನೈವೇದ್ಯ ಇಟ್ಟರು. ಗ್ರಾಮಸ್ಥರು ಇದಕ್ಕೆ ಸಾಕ್ಷಿಯಾದರು.

ಬರುವ ಶ್ರಾವಣ ಮಾಸದಲ್ಲಿ ಎರಡೂ ಎತ್ತುಗಳಿಗೆ ಪುಟ್ಟ ದೇವಸ್ಥಾನ ಕಟ್ಟಿಸಿ ಪೂಜೆ ಮಾಡುತ್ತೇವೆ. ಎತ್ತುಗಳು ನಮ್ಮ ಕುಟುಂಬಕ್ಕೆ ದೇವರ ಸಮಾನ.
–ತಾಜುದ್ದೀನ್ ಜಾಡವಾಲೆ, ರೈತ
ಮುಸ್ಲಿಂ ಕುಟುಂಬದವರು ಎತ್ತುಗಳಿಗೆ ಹಿಂದೂ ದೇವರ ಹೆಸರಿಟ್ಟಿದ್ದು ಸಹಬಾಳ್ವೆಯ ಪ್ರತೀಕ. ಶವಗಳಿಗೂ ಗೌರವ ನೀಡಿದ್ದು ಮಾದರಿ
–ರವೀಂದ್ರ ಬಾವಿಮನಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.