ADVERTISEMENT

ಕ್ಯಾನ್ಸರ್‌ ಗೆಲ್ಲಲಾರದೇ ಬದುಕಿನಿಂದ ಹೊರನಡೆದ ಮುತ್ತಪ್ಪ ರೈ

ಜಯ ಕರ್ನಾಟಕ ಸಂಘಟನೆ ಮೂಲಕ ಸಮಾಜ ಸೇವೆಯ ಯತ್ನ | ಬದುಕಿನುದ್ದಕ್ಕೂ ವಿವಾದಗಳ ನಂಟು

ಆರ್.ಜಿತೇಂದ್ರ
Published 15 ಮೇ 2020, 3:34 IST
Last Updated 15 ಮೇ 2020, 3:34 IST
ಮುತ್ತಪ್ಪ ರೈ ತಮ್ಮ ಕಡೆಯ ಪತ್ರಿಕಾಗೋಷ್ಠಿ ಸಂದರ್ಭ ಮಾಧ್ಯಮದ ಮುಂದೆ ಕೈ ಬೀಸಿದ್ದ ಕ್ಷಣ
ಮುತ್ತಪ್ಪ ರೈ ತಮ್ಮ ಕಡೆಯ ಪತ್ರಿಕಾಗೋಷ್ಠಿ ಸಂದರ್ಭ ಮಾಧ್ಯಮದ ಮುಂದೆ ಕೈ ಬೀಸಿದ್ದ ಕ್ಷಣ   

ರಾಮನಗರ:‘ನನ್ನ ಟಿಕೆಟ್‌ ಎಂದೋ ಬುಕ್ ಆಗಿದೆ’ ಎಂದು ತಮ್ಮ ಸಾವನ್ನು ತಾವೇ ಘೋಷಿಸಿಕೊಂಡು ಬಿಡದಿಯ ಮನೆಯಲ್ಲಿ ಕಡೆಯ ದಿನಗಳನ್ನು ದೂಡುತ್ತಿದ್ದ ಮುತ್ತಪ್ಪ ರೈ ಕ್ಯಾನ್ಸರ್‌ ವಿರುದ್ಧದ ಹೋರಾಟ ಗೆಲ್ಲಲಾಗದೇ ಹೊರ ನಡೆದಿದ್ದಾರೆ.

ದಕ್ಷಿಣ ಕನ್ನಡದ ನೆಲದ ಪುತ್ತೂರು ಸೀಮೆಯಿಂದ ಬಂದ ಬಂಟರ ಕುಟುಂಬದ ಕುಡಿಯಾದ ರೈ ಯುವಕನಾಗಿದ್ದಾಗ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡು, ತದ ನಂತರ ಅಪರಾಧ ಕೃತ್ಯಗಳ ಕಾರಣಕ್ಕೆ ಭೂಗತರಾಗಿದ್ದರು. ಈ ಎಲ್ಲ ಆರೋಪಗಳಿಂದ ಮುಕ್ತರಾಗಿ ಹೊರ ಬಂದ ಬಳಿಕ ಅವರು ನೆಲೆ ಕಂಡುಕೊಂಡಿದ್ದು ಬಿಡದಿಯಲ್ಲಿ.

ಇದನ್ನೂ ಓದಿ:ಮುತ್ತಪ್ಪ ರೈ ನಿಧನ

ADVERTISEMENT

ಎತ್ತರದ ಕಾಂಪೌಂಡುಗಳಿಂದ ಆವೃತವಾದ ಒಂದು ದೊಡ್ಡ ಬಡಾವಣೆ. ಅದರೊಳಗಿನ ಏಕೈಕ ಮನೆ ಅವರ ವಾಸಕ್ಕೆಂದೇ ಮೀಸಲಾಗಿತ್ತು. ಇಲ್ಲಿದ್ದುಕೊಂಡೇ ರೈ ಸಂಘಟನೆ, ಸೇವೆ ಮೊದಲಾದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸದಾ ಖಾಸಗಿ ಭಂಟರ ಕಣ್ಗಾವಲಿನಲ್ಲಿ ಇರುತ್ತಿದ್ದ ರೈ ಹೊರ ಬಂದಿದ್ದು ಕಡಿಮೆ.

ಕ್ಯಾನ್ಸರ್‌ ವಿರುದ್ಧ ಹೋರಾಟ: ವರ್ಷದ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಮುತ್ತಪ್ಪ ರೈ ಗುಣಮುಖರಾಗಲು ನಡೆಸಿದ್ದ ಪ್ರಯತ್ನಗಳು ಒಂದು ಹೋರಾಟದಂತೆ ಇತ್ತು.

‘ವರ್ಷದ ಹಿಂದೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಸಂದರ್ಭ ನನಗೆ ಬೆನ್ನು ನೋವು ಕಾಣಿಸಿಕೊಂಡಿತು. ನಂತರದಲ್ಲಿ ಪರೀಕ್ಷೆ ಮಾಡಲಾಗಿ ಅವರ ಲಿವರ್‌ನಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ದೆಹಲಿಯ ಮ್ಯಾಕ್ಸ್, ಚೆನ್ಮೈನ ಅಪೋಲೊ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ. ಶೇ 90 ರಷ್ಟು ಗುಣ ಆಗಿರುವುದಾಗಿ ವೈದ್ಯರು ಹೇಳಿದ್ದರು. ಆದರೆ ನಂತರದಲ್ಲಿ ಮತ್ತೆ ಮಿದುಳಿಗೆ ಕ್ಯಾನ್ಸರ್ ಕೋಶಗಳು ವ್ಯಾಪಿಸಿರುವುದಾಗಿ ಹೇಳಿ ಕೈಚೆಲ್ಲಿದರು’ ಎಂದು ತಾವು ಕ್ಯಾನ್ಸರ್‌ಗೆ ಬಲಿಯಾಗಿದ್ದನ್ನು ಸ್ವತಃ ಕೆಲ ತಿಂಗಳ ಹಿಂದೆ ಮಾಧ್ಯಮದ ಹಿಂದೆ ವಿವರಿಸಿದ್ದರು.

‘ಕಿಮೋ, ರೇಡಿಯೊ ಥೆರೆಪಿ ಸಹಿಸಲು ಅಸಾಧ್ಯವಾಗಿತ್ತು. ನನ್ನ ಶತ್ರುಗಳಿಗೂ ಈ ರೋಗ ಬರುವುದು ಬೇಡ’ ಎಂದು ಕಣ್ಣೀರು ಹಾಕಿದ್ದರು. ರೋಗದ ವಿರುದ್ಧ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯವನ್ನೂ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಲೇ ಬಂದಿದ್ದರು.

ಮುತ್ತಪ್ಪ ರೈ

ಸಂಘಟನೆಗೆ ಒತ್ತು: ಬದುಕಿನ ಸಂಧ್ಯಾಕಾಲದಲ್ಲಿ ಸಮಾಜ ಸೇವೆಯತ್ತ ಮನಸ್ಸು ಮಾಡಿದ್ದ ರೈ ಅದಕ್ಕೆಂದೇ ‘ಜಯ ಕರ್ನಾಟಕ’ ಎಂಬ ಹೆಸರಿನ ಸಂಘಟನೆ ಕಟ್ಟಿಕೊಂಡರು. ರಾಜ್ಯದಾದ್ಯಂತ ಅದನ್ನು ವಿಸ್ತರಿಸಿದ್ದರು. ಈ ಸಂಘಟನೆ ಹಲವು ಹೋರಾಟ, ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತ ಬಂದಿದೆ. ರಕ್ತದಾನ ಶಿಬಿರಗಳು, ಅಶಕ್ತರಿಗೆ ನೆರವು ಮೊದಲಾದ ಕಾರ್ಯಕ್ರಮಗಳನ್ನು ರೈ ಇದರ ಮೂಲಕ ಸಾಕಾರಗೊಳಿಸಿದ್ದರು.

ಧಾರ್ಮಿಕ ಒಲವು: ರೈ ಈಚಿನ ದಿನಗಳಲ್ಲಿ ಆಧಾತ್ಮ ಮತ್ತು ಧಾರ್ಮಿಕ ಕಾರ್ಯಕ್ರಮಗಳತ್ತ ಹೆಚ್ಚು ಒಲವು ಬೆಳೆಸಿಕೊಂಡಿದ್ದರು. ದೇವಾಲಯಗಳಿಗೆ ದಾನ-ಧರ್ಮ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದರು. ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು ಮಹಾಲಿಂಗೇಶ್ವರ ಹಾಗೂ ಉಳ್ಳಾಲದ ಸೋಮೇಶ್ವರ ದೇವರಿಗೆ ಬ್ರಹ್ಮರಥವನ್ನು ಅರ್ಪಿಸಿದ್ದರು.

ಕ್ರೀಡೆಯಲ್ಲೂ ಆಸಕ್ತಿ: ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಅಭ್ಯಾಸ ಹೊಂದಿದ್ದ ರೈ ರಾಮನಗರ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆಯ ಅಧ್ಯಕ್ಷರಾಗಿ ತಮ್ಮ ಮನೆಯ ಅಂಗಳದಲ್ಲೇ ಮ್ಯಾರಥಾನ್‌ ಆಯೋಜನೆ ಮಾಡಿದ್ದರು. ತದ ನಂತರದಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷರೂ ಆಗಿ ಕಾರ್ಯ ನಿರ್ವಹಿಸಿದ್ದರು. ಅನಾರೋಗ್ಯಕ್ಕೆ ತುತ್ತಾದ ಕಾರಣಕ್ಕೆ ಆ ಹುದ್ದೆಯನ್ನು ಬಿಟ್ಟುಕೊಟ್ಟರು.

ಬೆನ್ನುಬಿಡದ ವಿವಾದ: ಬದುಕಿನ ಕೊನೆಯವರೆಗೂ ವಿವಾದಗಳು ಮಾತ್ರ ಅವರನ್ನು ಬಿಡಲಿಲ್ಲ. ಅನ್ಯರಿಗೆ ಬೆದರಿಕೆ ಆರೋಪದ ಮೇಲೆ ಈಚೆಗೆ ಅವರು ವಿಚಾರಣೆ ಎದುರಿಸಬೇಕಾಯಿತು. ಎರಡು ವರ್ಷದ ಹಿಂದೆ ಆಯುಧ ಪೂಜೆ ಸಂದರ್ಭ ಶಸ್ತ್ರಾಸ್ತ್ರಗಳಿಗೆ ಪೂಜೆ ನೆರವೇರಿಸಿದ್ದೂ ಸಹ ವಿವಾದವಾಗಿತ್ತು. ಭೂಗತ ಲೋಕದ ಹಿಂದಿನ ಸಂಪರ್ಕಗಳ ಕಾರಣಕ್ಕೆ ಅವರು ಪೊಲೀಸ್‌ ಅಧಿಕಾರಿಗಳು, ಗುಪ್ತಚರ ಇಲಾಖೆಯಿಂದ ಆಗಾಗ್ಗೆ ವಿಚಾರಣೆಗೂ ಒಳಗಾಗುತ್ತ ಬಂದಿದ್ದರು.

ರೈ ಕೃಷಿ ಬಗ್ಗೆಯೂ ಆಸಕ್ತಿ ಹೊಂದಿದ್ದು, ನಾಡಿನ ಹಲವೆಡೆ ನೂರಾರು ಎಕರೆ ಕೃಷಿ ಭೂಮಿ, ಫಾರ್ಮ್‌ ಹೌಸ್‌ ಹೊಂದಿದ್ದರು. ಬಿಡದಿಯ ತಮ್ಮ ಬಡಾವಣೆಯ ಅಂಗಳದಲ್ಲೇ ಪುಷ್ಪ ಕೃಷಿಯ ಪ್ರಯೋಗವನ್ನೂ ಮಾಡಿದ್ದರು. ಮೊದಲ ಪತ್ನಿ ರೇಖಾ ಮೃತಪಟ್ಟ ಬಳಿಕ, ಮೂರು ವರ್ಷದ ಹಿಂದೆ ಅನುರಾಧಾ ಎಂಬುವರನ್ನು ಎರಡನೇ ವಿವಾಹ ಆಗಿದ್ದರು.

ಆಸ್ತಿ ವಿಲ್‌: ಮುತ್ತಪ್ಪ ರೈ ಅವರ ಆಸ್ತಿ ಎಷ್ಟು ಎಂಬುದನ್ನು ಅವರು ಬಹಿರಂಗಗೊಳಿಸಿರಲಿಲ್ಲ. ‘ವರ್ಷಕ್ಕೆ 30–40 ಕೋಟಿ ತೆರಿಗೆಯನ್ನೇ ಕಟ್ಟುತ್ತಿದ್ದೇನೆ’ ಎಂದು ರೈ ಹೇಳಿಕೊಂಡಿದ್ದರು. ಕ್ಯಾನ್ಸರ್‌ಗೆ ತುತ್ತಾಗಿರುವುದು ಖಾತ್ರಿಯಾಗುತ್ತಿದ್ದಂತೆ ಅವರು ತಮ್ಮ ಆಸ್ತಿಯನ್ನು ಬೇಕಾದವರ ಹೆಸರಿಗೆ ವಿಲ್‌ ಮಾಡಿದ್ದರು. ಅಲ್ಲದೇ ತಮ್ಮ ಬದುಕಿನಲ್ಲಿ ಇಷ್ಟು ದಿನ ಜೊತೆಯಾದ ಆಪ್ತರು, ಸಂಘಟನೆಯ ಪ್ರಮುಖರಿಗೆ ನಿವೇಶನಗಳನ್ನು ನೀಡುವುದಾಗಿಯೂ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.