
ಬೆಂಗಳೂರು: ‘ಮದ್ಯ ಮಾರಾಟ ಸನ್ನದು ನೀಡುವಲ್ಲಿ ಲಂಚ ಪಡೆಯಲು ಅಧಿಕಾರಿಗಳು ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಹಾಗೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಈ ಖಾತೆಯೇ ಅಂಥದ್ದು. ಈ ಹಿಂದೆ ಸಚಿವರಾಗಿದ್ದವರ ವಿರುದ್ಧವೂ ಆರೋಪಗಳು ಬಂದಿವೆ. ಈಗಲೂ ಬರುತ್ತಿವೆ. ಆದರೆ ಅವೆಲ್ಲಾ ಸುಳ್ಳು’ ಎಂದರು.
ನಿಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ಸಾಮಾನ್ಯ ಎಂದು ಹೇಳುತ್ತಿದ್ದೀರಾ ಎಂದು ಸುದ್ದಿಗಾರರು ಕೇಳಿದಾಗ ಸಿಟ್ಟಾದರು.
‘ಸಿಎಲ್–7 ಸನ್ನದು ನೀಡುವಲ್ಲಿ ಮೊದಲು 16 ವಿವಿಧ ಅಧಿಕಾರಿಗಳ ಬಳಿ ಕಡತ ಹೋಗಬೇಕಿತ್ತು. ಉದ್ದೇಶಪೂವಕವಾಗಿ ವಿಳಂಬ ಮಾಡಲು ಮತ್ತು ಭ್ರಷ್ಟಾಚಾರಕ್ಕೆ ಅವಕಾಶವಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಸಿಎಲ್–7 ಸನ್ನದು ಮಂಜೂರು ಮಾಡುವ ಹಂತಗಳನ್ನು ಈಗ 7ಕ್ಕೆ ಇಳಿಸಿದ್ದೇವೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ 35 ದಿನಗಳ ಒಳಗೆ ಸನ್ನದು ಸಿಗಲಿದೆ. ಅದನ್ನೂ 20 ದಿನಗಳಿಗೆ ಇಳಿಸುವ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ. ಇದರಿಂದ ಕೆಲವರಿಗೆ ತೊಂದರೆ ಆಗಿದೆ. ಹೀಗಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಆಪಾದಿಸಿದರು.
ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವವರು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಿರುತ್ತಾರೆ. ಆದರೂ ಅದು ತಪ್ಪು. ಅಂತಹವರ ವಿರುದ್ಧ 15000 ಕ್ಕಿಂತ ಹೆಚ್ಚು ಪ್ರಕರಣ ದಾಖಲಿಸಿದ್ದೇವೆ.- ಆರ್.ಬಿ.ತಿಮ್ಮಾಪುರ, ಅಬಕಾರಿ ಸಚಿವ
‘ಯಾರಿಗೆ ತೊಂದರೆ ಆಗಿದೆ’ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಲಿಲ್ಲ.
‘ಮದ್ಯ ಮಾರಾಟ ಸನ್ನದುಗಳ ಅವಧಿಯನ್ನು ಐದು ವರ್ಷಗಳಿಗೆ ಹೆಚ್ಚಿಸಿದ್ದೇವೆ. ಇದರಿಂದಲೂ ಕೆಲವರಿಗೆ ತೊಂದರೆ ಆಗಿದೆ. ಕೆಲವು ಅಧಿಕಾರಿಗಳು ಸಚಿವರ ಹೆಸರು ಹೇಳಿ, ದುರುಪಯೋಗ ಮಾಡಿಕೊಂಡಿರುವುದು ಗೊತ್ತಾಗಿದೆ. ಇಲಾಖೆಯಲ್ಲಿ ಭ್ರಷ್ಟಾಚಾರ ಇಲ್ಲವೇ ಇಲ್ಲ ಎಂದಲ್ಲ. 158 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 19 ಜನರ ವಿರುದ್ಧ ಇಲಾಖಾ ತನಿಖೆ ನಡೆಯುತ್ತಿದ್ದರೆ, 85 ಜನರ ವಿರುದ್ಧದ ಪ್ರಕರಣವು ಸರ್ಕಾರದ ಹಂತದಲ್ಲಿದೆ. 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಭ್ರಷ್ಟಾಚಾರದ ವಿಚಾರದಲ್ಲಿ ನಾವು ಸುಮ್ಮನೆ ಕೂತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು.
‘ಹಾಗಿದ್ದರೆ, ಲಂಚದ ವಿಚಾರ ಯಾಕೆ ಮುನ್ನೆಲೆಗೆ ಬಂತು’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ವಿಶೇಷ ಅಧಿವೇಶನದಲ್ಲಿ ನರೇಗಾ ಯೋಜನೆ ಬಗ್ಗೆ ಚರ್ಚಿಸುವುದು ಬಜೆಪಿ ಸದಸ್ಯರಿಗೆ ಬೇಡವಾಗಿತ್ತು. ಹೀಗಾಗಿ ನನ್ನ ಮೇಲಿನ ಆರೋಪಕ್ಕೆ ಅವರು ಜೋತುಬಿದ್ದರು. ಅದೇ ವಿಚಾರವಾಗಿ ಸದನ ನಡೆಯಲು ಬಿಡಲಿಲ್ಲ. ನಾನೂ ಉತ್ತರ ಕೊಟ್ಟೆ. ನರೇಗಾ ಕುರಿತ ಚರ್ಚೆಯನ್ನು ಸರ್ಕಾರ ನಡೆಸಿತು. ಇದರಲ್ಲಿ ಬಿಜೆಪಿಯ ಕೈ ಮೇಲಾಗಲಿಲ್ಲ’ ಎಂದರು.
ಆದಾಯ: ಶೇ 83.43ರಷ್ಟು ಪ್ರಗತಿ
‘2025–26ನೇ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯಿಂದ ₹40000 ಕೋಟಿ ಆದಾಯ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿತ್ತು. ಈಗಾಗಲೇ ₹34235 ಕೋಟಿ ಸಂಗ್ರಹಿಸಿದ್ದು ಶೇ 83.43ರಷ್ಟು ಗುರಿ ಸಾಧಿಸಿದ್ದೇವೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ₹40000 ಕೋಟಿಗಿಂತಲೂ ಹೆಚ್ಚು ಆದಾಯ ಸಂಗ್ರಹವಾಗಲಿದೆ’ ಎಂದು ಆರ್.ಬಿ.ತಿಮ್ಮಾಪುರ ಹೇಳಿದರು.
‘ಈಚಿನ ವರ್ಷಗಳಲ್ಲಿ ಅಬಕಾರಿ ಇಲಾಖೆಯು ಆದಾಯ ಸಂಗ್ರಹದಲ್ಲಿ ಬಜೆಟ್ ಅಂದಾಜನ್ನು ಮುಟ್ಟಿರಲೇ ಇಲ್ಲ. ಅಂದಾಜಿಗಿಂತ ₹2000 ಕೋಟಿ–₹3000 ಕೋಟಿ ಕಡಿಮೆ ಸಂಗ್ರಹವಾಗಿತ್ತು. ಈ ಬಾರಿ ಬಜೆಟ್ ಅಂದಾಜನ್ನು ಮೀರಿಸಲಿದ್ದೇವೆ. ಬೇರೆ ಎಲ್ಲ ಇಲಾಖೆಗಳಿಗಿಂತ ಉತ್ತಮ ಪ್ರಗತಿ ಸಾಧಿಸಿದ್ದೇವೆ’ ಎಂದು ವಿವರಿಸಿದರು.
‘ಬಜೆಟ್ ಅಂದಾಜಿಗಿಂತ ಹೆಚ್ಚು ಅಂದರೆ ₹43000 ಕೋಟಿ ಸಂಗ್ರಹವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಮದ್ಯ ಮಾರಾಟ ಸನ್ನದುಗಳ ಹರಾಜಿನ ವಿರುದ್ಧ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದರಿಂದ ಸ್ವಲ್ಪ ಕಡಿಮೆ ಆಗಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.