ADVERTISEMENT

ಮೈಸೂರು– ಬೆಂಗಳೂರು ನಡುವಿನ 11 ರೈಲುಗಳ ವೇಗ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 22:03 IST
Last Updated 11 ನವೆಂಬರ್ 2019, 22:03 IST
   

ಮೈಸೂರು: ಮೈಸೂರು– ಬೆಂಗಳೂರು ರೈಲು ಜೋಡಿ ಮಾರ್ಗ ನಿರ್ಮಾಣವಾದ ಮೇಲೂ ರೈಲುಗಳ ವೇಗ ಆಮೆಗತಿಯಲ್ಲೇ ಇತ್ತು. ಪ್ರಯಾಣಿಕರ ಒತ್ತಾಯದ ಮೇಲೆ 11 ರೈಲುಗಳ ವೇಗವನ್ನು ನ. 13ರಿಂದ ಹೆಚ್ಚಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಈವರೆಗೆ ರೈಲುಗಳ ಪ್ರಯಾಣದ ಅವಧಿಯು ಎರಡೂವರೆ ಗಂಟೆಯಿಂದ ಮೂರು ಗಂಟೆ ಇಪ್ಪತ್ತು ನಿಮಿಷ ಇತ್ತು. ಇದೀಗ ಪ್ರಯಾಣದ ಅವಧಿಯು ಕನಿಷ್ಠ ಎರಡೂ ಕಾಲು ಗಂಟೆಗೆ ಇಳಿದಿದೆ. ನಿಲುಗಡೆ ಸಂಖ್ಯೆಯನ್ನೇನು ಕಡಿಮೆ ಮಾಡಿಲ್ಲ. ಆದರೆ, ವೇಗವನ್ನು ಹೆಚ್ಚಿಸಲಾಗಿದೆ.

ಜೋಡಿ ರೈಲು ಮಾರ್ಗವು ವಿದ್ಯುದೀಕರಣಗೊಂಡ ಮೇಲೆ ಮಾರ್ಗದ ವೇಗ ಸಾಮರ್ಥ್ಯ ಹೆಚ್ಚಿದೆ. ವೇಗದ ಗರಿಷ್ಠ ಮಿತಿಗಿಂತಲೂ ಕಡಿಮೆ ವೇಗದಲ್ಲಿಯೇ ರೈಲುಗಳು ಸಂಚರಿಸುತ್ತಿವೆ. ಗಂಟೆಗೆ 100 ಕಿ.ಮೀ ವೇಗ ತಡೆದುಕೊಳ್ಳುವ ಸಾಮರ್ಥ್ಯ ಹೊಸ ಹಳಿಗಳಿಗಿದೆ.

ADVERTISEMENT

ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಒಟ್ಟು 6 ರೈಲುಗಳ ವೇಗ ಹೆಚ್ಚಳವಾಗಿದೆ. ಜೈಪುರ– ಮೈಸೂರು ಎಕ್ಸ್‌ಪ್ರೆಸ್ (12975) ರೈಲು ಮುಂಚೆ 2.25 ಗಂಟೆ ಪ್ರಯಾಣ ಅವಧಿಯಿತ್ತು. ಈಗ 2.15 ಗಂಟೆಗೆ ಇಳಿದಿದೆ. ಕಾಚಿಗುಡ ಎಕ್ಸ್‌ಪ್ರೆಸ್ (12786) 2.55ರಿಂದ 2.25 ಗಂಟೆಗೆ, ಹಂಪಿ/ಗೋಲಗುಂಬಜ್ ಎಕ್ಸ್‌ಪ್ರೆಸ್ (16535) 3.00ರಿಂದ 2.45 ಗಂಟೆಗೆ, ಮೈಲಾಡತೊರೈ ಎಕ್ಸ್‌ಪ್ರೆಸ್‌ (16232) 2.30ರಿಂದ 2.25 ಗಂಟೆ, ಟ್ಯುಟಿಕಾರಿನ್ ಎಕ್ಸ್‌ಪ್ರೆಸ್‌ (16236) 3.00ರಿಂದ 2.45 ಗಂಟೆ, ಚಾಮರಾಜನಗರ– ತಿರುಪತಿ ಎಕ್ಸ್‌ಪ್ರೆಸ್ (16219) 3.20ರಿಂದ 3.10 ಗಂಟೆಗೆ ಇಳಿದಿದೆ.

ಬೆಂಗಳೂರಿನಿಂದ ಮೈಸೂರಿಗೆ ಬರುವ ರೈಲುಗಳ ಪೈಕಿ, ವಾರಾಣಸಿ – ಮೈಸೂರು ಎಕ್ಸ್‌ಪ್ರೆಸ್‌ (16230) 2.30ರಿಂದ 2.15 ಗಂಟೆ, ರೇಣಿಗುಂಟ ಎಕ್ಸ್‌ಪ್ರೆಸ್‌ (11066) 2.30ರಿಂದ 2.15 ಗಂಟೆ, ಹೌರಾ ಮೈಸೂರು ಎಕ್ಸ್‌ಪ್ರೆಸ್ (22817) 2.55ರಿಂದ 2.25 ಗಂಟೆ, ಮೈಲದುತ್ತರೈ ಎಕ್ಸ್‌ಪ್ರೆಸ್ (16231) 2.30ರಿಂದ 2.20 ಗಂಟೆ, ಜೈಪುರ– ಮೈಸೂರು ಎಕ್ಸ್‌ಪ್ರೆಸ್ (12976) 2.45ರಿಂದ 2.30 ಗಂಟೆಗೆ ಇಳಿದಿದೆ. ‘2017ರಲ್ಲಿ ಜೋಡಿ ಮಾರ್ಗ ಮುಕ್ತವಾಗಿತ್ತು. 2018ರಲ್ಲಿ ವಿದ್ಯುತ್‌ ರೈಲುಗಳ ಸಂಚಾರ ಆರಂಭವಾಗಿದ್ದರೂ, ವೇಗ ಹೆಚ್ಚಳವಾಗಿರಲಿಲ್ಲ’ ಎಂದು ಮೈಸೂರು ಗ್ರಾಹಕರ ಪರಿಷತ್ ಸದಸ್ಯ ಯೋಗೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.