ADVERTISEMENT

ದಸರಾ: ಕಾಡಿನಿಂದ ನಾಡಿಗೆ ಗಜಪಯಣ

ನಾಡಹಬ್ಬ ದಸರಾ ಚಟುವಟಿಕೆಗಳಿಗೆ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:28 IST
Last Updated 2 ಸೆಪ್ಟೆಂಬರ್ 2018, 19:28 IST
ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಲಿರುವ ಆನೆಗಳಿಗೆ ಭಾನುವಾರ ನಾಗರಹೊಳೆ ಅಭಯಾರಣ್ಯದ ಬಳಿ ಬೀಳ್ಕೊಡಲಾಯಿತು
ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಲಿರುವ ಆನೆಗಳಿಗೆ ಭಾನುವಾರ ನಾಗರಹೊಳೆ ಅಭಯಾರಣ್ಯದ ಬಳಿ ಬೀಳ್ಕೊಡಲಾಯಿತು   

ಮೈಸೂರು: ಗಜಪಡೆಯು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕುತ್ತಿದ್ದಂತೆ ಹಾಡಿಗಳ ಜನರ ಕಣ್ಣಾಲಿಗಳು ನೀರಾಡಿದವು. ಪ್ರೀತಿಯಿಂದ ಸಾಕಿದ ಆನೆಗಳಿಂದ ಒಂದಿಷ್ಟು ದಿನ ದೂರ ಇರಬೇಕಲ್ಲಾ ಎಂಬ ದುಗುಡವದು. ಆನೆಗಳು ಕೂಡ ಸೊಂಡಿಲೆತ್ತಿ ಘೀಳಿಟ್ಟವು.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿ ಗೇಟ್‌ ಬಳಿ ಭಾನುವಾರ ಇಂತಹ ಭಾವುಕ ವಾತಾವರಣ ಸೃಷ್ಟಿಯಾಗಿತ್ತು.

ವಿಶ್ವಪ್ರಸಿದ್ಧ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಚಿನ್ನದ ಅಂಬಾರಿ ರೂವಾರಿ ಅರ್ಜುನ ಸೇರಿದಂತೆ ಐದು ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಬೀಳ್ಕೊಡಲಾಯಿತು. ಈ ಮೂಲಕ ದಸರಾ ಚಟುವಟಿಕೆಗಳಿಗೆ ಮುನ್ನುಡಿ ಲಭಿಸಿತು.

ADVERTISEMENT

ಮೊದಲ ಹಂತದಲ್ಲಿ ಬಳ್ಳೆ ಶಿಬಿರದ ಅರ್ಜುನ (58), ದುಬಾರೆ ಶಿಬಿರದ ಧನಂಜಯ (35), ಆನೆಕಾಡು ಶಿಬಿರದ ಗೋಪಿ (36), ವಿಕ್ರಮ (45), ಮತ್ತಿಗೋಡು ಶಿಬಿರದ ವರಲಕ್ಷ್ಮಿ (62) ಅರಮನೆ ನಗರಿಯತ್ತ ಹೊರಟವು. ಚೈತ್ರಾ (47) ಆನೆ ಬಂಡೀಪುರ ಶಿಬಿರದಿಂದ ಬರಲಿದೆ. ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದವರು ಗಂಟುಮೂಟೆ ಕಟ್ಟಿಕೊಂಡು ಲಾರಿ ಏರಿದರು.

ನಾಲ್ಕೈದು ವರ್ಷಗಳಿಂದ ನಾಗಾಪುರ ಹಾಡಿ ಸಮೀಪ ಆಶ್ರಮ ಶಾಲೆ ಬಳಿ‌ ಕಾರ್ಯಕ್ರಮ ನಡೆಯುತ್ತಿತ್ತು. ಈ ಬಾರಿ ನಾಗರಹೊಳೆ ಅಭಯಾರಣ್ಯ ದ್ವಾರದ ಬಳಿಯೇ ಗಜಪಯಣಕ್ಕೆ ಚಾಲನೆ ನೀಡಿದ್ದು ವಿಶೇಷ. ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಪುಷ್ಪಾರ್ಚನೆ ಮಾಡಿದರು. ಮಾವುತರನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ, ಶಾಸಕ ಎಚ್‌.ವಿಶ್ವನಾಥ್‌ ಸನ್ಮಾನಿಸಿದರು.

ಒಟ್ಟು 12 ಆನೆಗಳು ಈ ಬಾರಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ. ರಾಮನಗರದ ಬಳಿ ಕಾಡಾನೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಬಲರಾಮ, ಅಭಿಮನ್ಯು, ದ್ರೋಣ ಸೇರಿದಂತೆ ಉಳಿದ ಆರು ಆನೆಗಳು ಎರಡನೇ ಹಂತದಲ್ಲಿ ನಗರಕ್ಕೆ ಬರಲಿವೆ.

35 ವರ್ಷದ ಧನಂಜಯ ಈ ಬಾರಿ ಹೊಸ ಅತಿಥಿ. ಸತತ ಏಳನೇ ಬಾರಿ ಚಿನ್ನದ ಅಂಬಾರಿ ಹೊರಲು ಅರ್ಜುನ ಆನೆ ಸಜ್ಜಾಗಿದೆ. ಕಾಡಿನಿಂದ ಬಂದ ಈ ಆನೆಗಳು ಮೈಸೂರಿನ ಅರಣ್ಯ ಭವನದಲ್ಲಿ ತಂಗಲಿವೆ. ಸೆ.5ರಂದು ಮೈಸೂರು ಅರಮನೆ ಆವರಣ ಪ್ರವೇಶಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.