ಬಸವೇಶ್ವರನಗರ ಕೆಎಸ್‌ಐಸಿ ಮಾರಾಟ ಮಳಿಗೆಯ ಮುಂದೆ ಶನಿವಾರ ಟೋಕನ್‌ಗಾಗಿ ಗ್ರಾಹಕರು ಕಾದಿದ್ದರು
ಬೆಂಗಳೂರು: ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದೇ ಇರುವುದರಿಂದ ರೇಷ್ಮೆ ಸೀರೆ ಮಾರಾಟ ಮಳಿಗೆಗಳಲ್ಲಿ ಟೋಕನ್‌ಗಾಗಿ ನೂಕುನುಗ್ಗಲು ಉಂಟಾಗಿದೆ. ದಸರಾ ಸಮಯದಲ್ಲಿಯೂ ಪ್ರತಿ ಶನಿವಾರ ಮಾತ್ರ ‘ಮೈಸೂರು ಸಿಲ್ಕ್ ಸೀರೆ’ಗಳು ಸೀಮಿತ ಪ್ರಮಾಣದಲ್ಲಿ ದೊರೆಯುತ್ತಿವೆ.
ಐಷಾರಾಮಿ ಗುಣಮಟ್ಟ, ಕಲಾತ್ಮಕ ವಿನ್ಯಾಸ, ದೀರ್ಘ ಬಾಳಿಕೆ ಮತ್ತು ಆಕರ್ಷಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಇತಿಹಾಸ ಪ್ರಸಿದ್ಧ ಮೈಸೂರು ರೇಷ್ಮೆ ಸೀರೆಗಳು ಪ್ರತಿಷ್ಠೆಯ ಪ್ರತೀಕವೂ ಆಗಿವೆ. ಹಬ್ಬಗಳ ಸಮಯದಲ್ಲಿ ರೇಷ್ಮೆ ಸೀರೆಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ, ಒಂದು ವರ್ಷದಿಂದ ಸೀರೆಗಳ ಕೊರತೆ ಉಂಟಾಗಿದೆ ಎಂದು ಗ್ರಾಹಕರು ದೂರಿದ್ದಾರೆ.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತವು (ಕೆಎಸ್‌ಐಸಿಎಲ್) ಮೈಸೂರು, ಟಿ. ನರಸೀಪುರ ಮತ್ತು ಚನ್ನಪಟ್ಟಣದಲ್ಲಿ ಮೈಸೂರು ರೇಷ್ಮೆ ಸೀರೆಗಳನ್ನು ಉತ್ಪಾದಿಸುತ್ತಿದೆ. ಅಧಿಕೃತ ಮಳಿಗೆಗಳು ಕೂಡ ರಾಜ್ಯದಲ್ಲಿ ಬಹಳ ಕಡಿಮೆ ಇವೆ. ಬೆಂಗಳೂರಿನಲ್ಲಿ ಅತ್ಯಧಿಕ 8 ಮಳಿಗೆಗಳಿವೆ. ಮೈಸೂರಿನಲ್ಲಿ 5, ಚನ್ನಪಟ್ಟಣ ಮತ್ತು ದಾವಣಗೆರೆಯಲ್ಲಿ ತಲಾ ಒಂದು ಮಳಿಗೆಗಳಿವೆ. ರಾಜ್ಯದ ಯಾವುದೇ ನಗರದವರು ಮೈಸೂರು ರೇಷ್ಮೆ ಸೀರೆ ಬೇಕಿದ್ದರೆ ಇದೇ ಮಳಿಗೆಗಳಿಗೆ ಬರಬೇಕು. ಇಲ್ಲದೇ ಇದ್ದರೆ ಚೆನ್ನೈ ಅಥವಾ ಹೈದರಾಬಾದ್‌ನಲ್ಲಿರುವ ಮಳಿಗೆಯಿಂದ ಖರೀದಿಸಬೇಕು.
ರಾಜ್ಯದಲ್ಲಿ ಸೀಮಿತ ಮಳಿಗೆ ಗಳಿದ್ದರೂ ಬೇಕಾದಷ್ಟು ಸೀರೆಗಳ ಪೂರೈಕೆಯಾಗುತ್ತಿಲ್ಲ. ಬೆಂಗಳೂರಿನಲ್ಲಿ ಡಿ.ವಿ.ಜಿ ರಸ್ತೆ, ಗಾಂಧಿಬಜಾರ್, ಮಲ್ಲೇಶ್ವರ, ಕೆ.ಜಿ. ರಸ್ತೆ, ಬಸವೇಶ್ವರ ನಗರ, ಎಂ.ಜಿ. ರಸ್ತೆ (ಕಾಮರಾಜ ರಸ್ತೆ) ಮುಂತಾದ ಕಡೆಗಳಲ್ಲಿ ಮಳಿಗೆಗಳಿವೆ. ಸೀರೆಗಳೇ ಇಲ್ಲದ ಮೇಲೆ ಮಳಿಗೆ ಇದ್ದು ಏನು ಪ್ರಯೋಜನ ಎಂದು ಗ್ರಾಹರಾದ ಹರ್ಷಿತಾ ಪ್ರಶ್ನಿಸಿದರು.
ಪ್ರತಿ ಮಳಿಗೆಗೆ 60ರಿಂದ 70 ಸೀರೆಗಳು ವಾರಕ್ಕೊಮ್ಮೆ ಪೂರೈಕೆಯಾಗುತ್ತವೆ. ಶನಿವಾರ ಬೆಳಿಗ್ಗೆ ಬೇಗ ಹೋಗಿ ಟೋಕನ್‌ಗಾಗಿ ಸರದಿಯಲ್ಲಿ ನಿಲ್ಲಬೇಕು. ಕೆಲವರು ಬೆಳಿಗ್ಗೆ 5 ಗಂಟೆಗೇ ಬಂದು ನಿಂತಿರುತ್ತಾರೆ. 9.30ರ ಹೊತ್ತಿಗೆ ಭದ್ರತಾ ಸಿಬ್ಬಂದಿ ಬಂದು ಟೋಕನ್ ನೀಡುತ್ತಾರೆ. ಬೆಳಿಗ್ಗೆ 11.30ರ ಒಳಗೆ ಸೀರೆ ಖರೀದಿಯೇ ಮುಗಿದಿರುತ್ತದೆ. ಸೀರೆ ಬೇಕಿದ್ದರೆ ಮತ್ತೆ ಮುಂದಿನ ಶನಿವಾರವರೆಗೆ ಕಾಯಬೇಕು ಎಂದು ಗ್ರಾಹಕರು ದೂರಿದರು.
‘ನಮಗೆ ಪ್ರತಿವಾರ ಎಷ್ಟು ಸೀರೆಗಳು ಬರುತ್ತವೋ ಅಷ್ಟನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ. ನಾವು ಬೇಡಿಕೆ ಇಟ್ಟಿದ್ದರೂ ಹೆಚ್ಚು ಸೀರೆ ಪೂರೈಕೆ ಯಾಗುತ್ತಿಲ್ಲ’ ಎಂದು ಮಳಿಗೆ ನಿರ್ವಾಹಕರು ಮಾಹಿತಿ ನೀಡಿದರು. ಕೆಎಸ್‌ಐಸಿಎಲ್ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.
‘ಸತತ ಎರಡನೇ ವಾರ ಬಂದೆ’
ಮೈಸೂರು ರೇಷ್ಮೆ ಸೀರೆ ಎಂದರೆ ಕೇವಲ ಪ್ರತಿಷ್ಠೆ ಅಲ್ಲ. ಅದು ನಮ್ಮ ಪರಂಪರೆಯನ್ನು ಬಿಂಬಿಸುತ್ತದೆ. ಅದಕ್ಕಾಗಿ ಸೀರೆ ಖರೀದಿಗಾಗಿ ಬಸವೇಶ್ವರ ನಗರದಲ್ಲಿರುವ ಮಳಿಗೆಗೆ ಕಳೆದ ಶನಿವಾರ ಹೋಗಿದ್ದೆ. ಆದರೆ ಟೋಕನ್ ಸಿಗಲಿಲ್ಲ. ಈ ಶನಿವಾರ ಮತ್ತೆ ಬೇಗ ಹೋಗಿ ಟೋಕನ್ ತೆಗೆದುಕೊಂಡೆ’ ಎಂದು ಹರ್ಷಿತಾ ತಿಳಿಸಿದರು.
‘ಸರದಿಯಲ್ಲಿ ಮೊದಲಿದ್ದವರಿಗೆ ಸೀರೆ ಆಯ್ಕೆ ಮಾಡುವ ಅವಕಾಶವಾದರೂ ಸ್ವಲ್ಪ ಸಿಗುತ್ತದೆ. ಕೊನೆ ಕೊನೆಗೆ ಆಯ್ಕೆಯೂ ಇರುವುದಿಲ್ಲ. ಆರಿಸಿ ಬಿಟ್ಟಿದ್ದನ್ನು ತೆಗೆದುಕೊಳ್ಳಬೇಕು. ಅಲ್ಲದೇ ಒಂದು ಟೋಕನ್‌ಗೆ ಒಂದೇ ಸೀರೆ ಖರೀದಿಸಲು ಅವಕಾಶ ನೀಡಲಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜರಿ ಆಧರಿಸಿ ದರ
ಮೈಸೂರು ರೇಷ್ಮೆ ಸೀರೆಗಳ ದರವು ಸೀರೆಯ ಗುಣಮಟ್ಟ, ಜರಿ, ವಿನ್ಯಾಸವನ್ನು ಅವಲಂಬಿಸಿರುತ್ತದೆ. ₹ 5,000ದಿಂದ ₹ 50 ಸಾವಿರ ವರೆಗಿನ ಸೀರೆಗಳು ಸಾಮಾನ್ಯವಾಗಿ ಮಾರಾಟವಾಗುತ್ತವೆ. ಶುದ್ಧ ರೇಷ್ಮೆ, ನೈಜ ಚಿನ್ನದ ಜರಿ, ಚಿನ್ನ–ಬೆಳ್ಳಿ ಜರಿ, ಸಂಕೀರ್ಣವಾದ ನೇಯ್ಗೆ ಮತ್ತು ವಿಶೇಷ ಡೈಯಿಂಗ್ ತಂತ್ರಗಳು ಮೌಲ್ಯವನ್ನು ನಿರ್ಧರಿಸುತ್ತವೆ. ಅತಿ ಶ್ರೀಮಂತರು ₹ 1 ಲಕ್ಷವರೆಗಿನ ಸೀರೆಗಳನ್ನೂ ಖರೀದಿಸುತ್ತಾರೆ.
ಬೇರೆ ರೇಷ್ಮೆ ಸೀರೆಗೆ ಬೇಡಿಕೆ
ಕೆಎಸ್‌ಐಸಿಎಲ್‌ನ ಅಧಿಕೃತ ಮಳಿಗೆಗಳಲ್ಲಿ ಸೀರೆಗಳು ಸಿಗದೇ ಇರುವುದರಿಂದ ಖಾಸಗಿ ಮಳಿಗೆಗಳಲ್ಲಿರುವ ರೇಷ್ಮೆ ಸೀರೆಗಳಿಗೆ ಬೇಡಿಕೆ ಹೆಚ್ಚಿದೆ. ಮೈಸೂರು ರೇಷ್ಮೆ ಸೀರೆಯಷ್ಟೇ ಗುಣಮಟ್ಟವನ್ನು ಇವು ಹೊಂದಿವೆ ಎಂದು ಖಾಸಗಿ ಮಳಿಗೆಗಳ ಮಾಲೀಕರು ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಹಕ ನಾಡಿಗೇರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.