ADVERTISEMENT

ಅತ್ಯಾಚಾರ ಪ್ರಕರಣ: ಬಿ.ಇ ವಿದ್ಯಾರ್ಥಿಗಳ ಮೇಲೆ ಶಂಕೆ

ನಾಲ್ವರು ಆರೋಪಿಗಳ ಪತ್ತೆಗೆ ಕೇರಳದತ್ತ ಪೊಲೀಸರ ತಂಡ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 22:15 IST
Last Updated 27 ಆಗಸ್ಟ್ 2021, 22:15 IST
ಪ್ರಕರಣ ಸಂಬಂಧ ಮಹತ್ವದ ಸುಳಿವು
ಪ್ರಕರಣ ಸಂಬಂಧ ಮಹತ್ವದ ಸುಳಿವು   

ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ಗುಡ್ಡದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂಬಂಧ ನಾಲ್ವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅವರ ಪತ್ತೆಗಾಗಿ ಪೊಲೀಸರ ತಂಡ ಕೇರಳಕ್ಕೆ ತೆರಳಿದೆ.

‘ಪ್ರಕರಣ ಸಂಬಂಧ ಮಹತ್ವದ ಸುಳಿವು ಸಿಕ್ಕಿದೆ. ಮೊಬೈಲ್‌ ಟವರ್‌ ಸಿಗ್ನಲ್, ಕರೆಗಳ ಮಾಹಿತಿ ಆಧರಿಸಿ ವಿದ್ಯಾರ್ಥಿಗಳ ಕೈವಾಡವಿರುವುದನ್ನು ಪತ್ತೆ ಹಚ್ಚಲಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಅತ್ಯಾಚಾರ ಕೃತ್ಯ ನಡೆದ ನಂತರ ಆರೋಪಿ ವಿದ್ಯಾರ್ಥಿಗಳು ಒಂದು ದಿನ ಮಾತ್ರ ಮೈಸೂರಿನಲ್ಲಿದ್ದು ಕೇರಳಕ್ಕೆ ತೆರಳಿದ್ದಾರೆ ಎಂಬ ಖಚಿತ ಮಾಹಿತಿ ದೊರಕಿದೆ. ನಾಲ್ವರ ಪೈಕಿ ಮೂವರು ತಮಿಳುನಾಡಿನವರು, ಒಬ್ಬರು ಕೇರಳದವರು. ಎಲ್ಲರೂ ಮೈಸೂರಿನ ಕಾಲೇಜು ವಿದ್ಯಾರ್ಥಿಗಳು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಗೃಹ ಸಚಿವರ ಸುತ್ತಾಟ

ಸಾಮೂಹಿಕ ಅತ್ಯಾಚಾರದ ಪ್ರಕರಣದ ಮಾಹಿತಿ ಪಡೆಯಲು ಗುರುವಾರ ರಾತ್ರಿಯೇ ನಗರಕ್ಕೆ ಬಂದು ವಾಸ್ತವ್ಯ ಹೂಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಚಾಮುಂಡಿಬೆಟ್ಟದ ಭೇಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಬೆಳಿಗ್ಗೆ ಬೆಟ್ಟಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ, ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ ಫೈರಿಂಗ್ ಸಿಮುಲೇಟರ್‌ ಅನ್ನು ಉದ್ಘಾಟಿಸಿ, ತಾವೂ ಫೈರಿಂಗ್‌ ನಡೆಸಿ ಖುಷಿಪಟ್ಟರು. ಮಾದರಿ ಪೊಲೀಸ್ ಠಾಣೆ, ಪರೀಕ್ಷಾರ್ಥಿಗಳ ಕೊಠಡಿ, ಸಭಾಂಗಣ, ಗ್ರಂಥಾಲಯ ವೀಕ್ಷಿಸಿದರು.

ನಾಲ್ವರು ಅಧಿಕಾರಿಗಳೊಂದಿಗೆ ಅವರು ಸಭೆ ಆರಂಭಿಸುವ ಹೊತ್ತಿಗೆ ಮಧ್ಯಾಹ್ನ 1 ಗಂಟೆಯಾಗಿತ್ತು. ನಂತರ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ಕೊಟ್ಟರು. ಸಂಜೆ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದ ಸಚಿವರು, ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ದರೋಡೆ ಪ್ರಕರಣದ ತನಿಖೆ ವಿವರವನ್ನಷ್ಟೇ ನೀಡಿ ಮೂರೂವರೆ ನಿಮಿಷದಲ್ಲಿ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.