ಮೈಸೂರು: ‘ದಸರಾ ನಾಡಹಬ್ಬ. ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ. ಒಂದು ಧರ್ಮವನ್ನು ಹೊರಗಿಟ್ಟು ದಸರಾ ಮಾಡಲು ಸಾಧ್ಯವೇ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸರ್ ಮಿರ್ಜಾ ಇಸ್ಮಾಯಿಲ್ ದಿವಾನರಾಗಿ ದಸರಾ ಮಾಡಿಲ್ಲವೇ? ಕವಿ ನಿಸಾರ್ ಅಹಮ್ಮದ್ ದಸರಾ ಉದ್ಘಾಟಿಸಲ್ಲವೇ? ಇದಕ್ಕೆಲ್ಲಾ ತಕರಾರು ತೆಗೆಯಬಾರದು. ಚಾಮುಂಡೇಶ್ವರಿ ತಾಯಿ ನಂಬುವುದು, ಬಿಡುವುದು ಉದ್ಘಾಟಕರಿಗೆ ಸೇರಿದ್ದು. ಇದು ಊರ ಹಬ್ಬ, ಎಲ್ಲರೂ ಸೇರಿಯೇ ಮಾಡಬೇಕು’ ಎಂದರು.
ದಸರಾ ಮುನ್ನಡೆಸಿದ್ದು ಹೈದರಾಲಿ– ಟಿಪ್ಪು: ಶಾಸಕ ತನ್ವೀರ್ ಸೇಠ್
‘ಯದುವಂಶದ ಮಹಾರಾಜರು ಪಟ್ಟದಲ್ಲಿ ಇಲ್ಲದಿದ್ದಾಗ ಹೈದರಾಲಿ- ಟಿಪ್ಪು ದಸರಾ ನಡೆಸಿದ್ದರು. ಅದನ್ನು ಮರೆಯಬಾರದು. ವ್ಯಕ್ತಿಯ ಸ್ಥಾನಮಾನ ಗುರುತಿಸಿ, ದಸರಾ ಉದ್ಘಾಟನೆಗೆ ಕರೆಯುತ್ತೇವೆ. ಎಸ್.ಎಲ್.ಭೈರಪ್ಪ ಅವರನ್ನು ಕರೆದಾಗ ನಾವು ಟೀಕೆ ಮಾಡಿರಲಿಲ್ಲ. ತಾಯಿ ಚಾಮುಂಡಿಗೆ ಪೂಜೆ ಮಾಡಿಯೇ ದಸರಾ ಮಾಡುತ್ತೇವೆ’ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಹೇಳಿಕೆಗೆ ನಗರದಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ , ‘ದಸರಾ ಧರ್ಮ, ಜಾತಿಗೆ ಸಿಮೀತವಲ್ಲ. ನನ್ನ ನಂಬಿಕೆ ಏನು ಎಂಬುದು ಎಲ್ಲರಿಗೂ ತೋರಿಸಲು ಆಗಲ್ಲ. ಟೀಕೆ ಮಾಡುವವರಿಗೆ ತಾಳ್ಮೆ ಇರಲಿ. ಬೆಂಕಿಯ ಕಾವು ತೆಗೆದುಕೊಳ್ಳುವ ನೆಪದಲ್ಲಿ ಅದರಲ್ಲಿ ಸುಟ್ಟು ಹೋಗಬೇಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.