ಥಾವರಚಂದ್ ಗೆಹಲೋತ್, ಸಿದ್ದರಾಮಯ್ಯ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿರುವ ಅರ್ಜಿಯಲ್ಲಿ ಆರೋಪಗಳ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ.
ಜುಲೈ 27ರಂದೇ ನೋಟಿಸ್ ಕಳುಹಿಸಲಾಗಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ನೋಟಿಸ್‌ಗೆ ವಿವರಣೆ ನೀಡುವ ಬಗ್ಗೆ ಹಾಗೂ ಸರ್ಕಾರದ ಮುಂದಿನ ಹೆಜ್ಜೆಯ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ. ನೋಟಿಸ್‌ಗೆ ಸಂಬಂಧಿಸಿದ ವಿಚಾರ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಹೊರಗುಳಿಯಲಿದ್ದಾರೆ. ಹಿರಿಯ ಸಚಿವರೊಬ್ಬರು ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ, ಸರ್ಕಾರದ ತೀರ್ಮಾನ ಹೊರಬೀಳಲಿದೆ.
ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ಅನುಮತಿ ಕೋರಿ ವಕೀಲ ಟಿ.ಜೆ. ಅಬ್ರಹಾಂ ಅವರು 22 ಪುಟಗಳ ಅರ್ಜಿಯನ್ನು ಜುಲೈ 26ರಂದು ರಾಜ್ಯಪಾಲರಿಗೆ ಸಲ್ಲಿಸಿದ್ದರು.
‘ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮ ನಡೆಸಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ₹55.80 ಕೋಟಿ ನಷ್ಟವಾಗಿದೆ. ಈ ಬಗ್ಗೆ ತನಿಖೆಗಾಗಿ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ 7, 9, 11, 12 ಮತ್ತು 13ನೇ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಭಾರತೀಯ ನ್ಯಾಯಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವ ಅಗತ್ಯವಿದೆ’ ಎಂದು ಅರ್ಜಿಯಲ್ಲಿ ಅಬ್ರಹಾಂ ವಿವರಿಸಿದ್ದರು.
ಅಬ್ರಹಾಂ ಅವರಿಂದ ಒಂದೂವರೆ ಗಂಟೆ ವಿವರಣೆ ಪಡೆದಿದ್ದ ರಾಜ್ಯಪಾಲರು, ಕೆಲವು ವಿಷಯಗಳಲ್ಲಿ ಮತ್ತಷ್ಟು ಸ್ಪಷ್ಟನೆ ಕೇಳಿದ್ದರು. ಪೂರಕ ದಾಖಲೆಯನ್ನು ಅಂದು ಸಂಜೆಯೊಳಗೆ ಸಲ್ಲಿಸುವಂತೆಯೂ ಸೂಚಿಸಿದ್ದರು. ದಾಖಲೆಗಳನ್ನು ಕಾನೂನು ತಜ್ಞರಿಗೆ ಕಳುಹಿಸಿದ್ದ ರಾಜ್ಯಪಾಲರು, ಈ ಬಗ್ಗೆ ಮುಂದೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಿದ್ದರು ಎಂದು ಹೇಳಲಾಗಿತ್ತು.
ಸಿದ್ದರಾಮಯ್ಯ ವಿರುದ್ಧ ಜುಲೈ 18ರಂದು ಮೈಸೂರು ಲೋಕಾಯುಕ್ತ ಪೊಲೀಸರ ಮುಂದೆ, ಅಬ್ರಹಾಂ ದೂರು ದಾಖಲಿಸಿದ್ದರು. ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿ ಅಗತ್ಯವಿದೆ. ಈ ಕಾರಣಕ್ಕಾಗಿ, ಅಬ್ರಹಾಂ ರಾಜ್ಯಪಾಲರ ಮೊರೆ ಹೋಗಿದ್ದರು.
‘ಮುಖ್ಯಮಂತ್ರಿ ವಿರುದ್ಧ ವೈಯಕ್ತಿಕವಾಗಿ ದೂರು ಸಲ್ಲಿಕೆಯಾದಾಗ, ಅದರ ಬಗ್ಗೆ ಪತ್ರ ಅಥವಾ ನೋಟಿಸ್ ಮೂಲಕ ವಿವರಣೆ ಕೇಳುವುದು ಸಾಮಾನ್ಯ. ಆ ಪ್ರಕ್ರಿಯೆ ಭಾಗವಾಗಿಯೇ, ಅರ್ಜಿಗಳಲ್ಲಿ ಉಲ್ಲೇಖಿಸಲಾದ ಆರೋಪಗಳಿಗೆ ಸ್ಪಷ್ಟನೆ ನೀಡುವಂತೆ ರಾಜ್ಯಪಾಲರು ಸೂಚಿಸಿದ್ದಾರೆ’ ಎಂದು ಸರ್ಕಾರದ ಮೂಲಗಳು ಹೇಳಿವೆ.
ಈ ಮಧ್ಯೆಯೇ, ಸಿದ್ದರಾಮಯ್ಯ ಅವರು ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಗೆ ಸಂಪುಟ ಸಹೋದ್ಯೋಗಿಗಳಿಗೆ ಉಪಾಹಾರ ಕೂಟ ಏರ್ಪಡಿಸಿದ್ದಾರೆ. ಈ ವೇಳೆಯಲ್ಲಿಯೂ ಮುಡಾ ವಿಚಾರ ಮತ್ತು ರಾಜ್ಯಪಾಲರ ನಡೆಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.
ಎರಡು ದಿನಗಳ ದೆಹಲಿ ಪ್ರವಾಸ ತೆರಳಿದ್ದ ಮುಖ್ಯಮಂತ್ರಿ, ನಗರಕ್ಕೆ ಬುಧವಾರ ಸಂಜೆ ವಾಪಸಾಗಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿರುವ ಮುಖ್ಯಮಂತ್ರಿ, ಮುಡಾ ವಿಚಾರವೂ ಸೇರಿದಂತೆ ರಾಜ್ಯ ರಾಜಕೀಯದಲ್ಲಿನ ಸದ್ಯದ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದರು.
ರಾಜ್ಯಪಾಲರ ಮೂಲಕ ಸರ್ಕಾರ ಉರುಳಿಸಲು ಯತ್ನ: ಕೃಷ್ಣ ಬೈರೇಗೌಡ
ಹಾಸನ: ‘ಪ್ರತಿಪಕ್ಷಗಳು ರಾಜ್ಯಪಾಲರ ಕಚೇರಿ ದುರುಪಯೋಗ ಪಡಿಸಿಕೊಂಡು ರಾಜ್ಯ ಸರ್ಕಾರವನ್ನು ಬುಡಮೇಲು ಮಾಡಲು ಯತ್ನಿಸಿದರೆ, ನಾವು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಲಿದ್ದೇವೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದರು.
‘ರಾಜ್ಯಪಾಲರಿಗೆ ಅರ್ಜಿಗಳನ್ನು ಕೊಟ್ಟು ಸರ್ಕಾರಕ್ಕೆ ಪತ್ರಗಳನ್ನು ಬರೆಸಿ, ಏನಾದರೂ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಅವರನ್ನು ವಿವಾದಗಳಲ್ಲಿ ಸಿಲುಕಿಸಿ, ಸರ್ಕಾರ ಬುಡಮೇಲು ಮಾಡಲು ವಿಪಕ್ಷಗಳು ಹೊರಟಿವೆ’ ಎಂದರು. ‘ರಾಜ್ಯಪಾಲರ ಕಚೇರಿ ದುರುಪಯೋಗ ಮಾಡಿ, ಸರ್ಕಾರದ ಮೇಲೆ ಪಿತೂರಿ ಮಾಡಿದರೆ ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ’ ಎಂದರು.
ಯಾವ ಆಧಾರದಲ್ಲಿ ಅನುಮತಿ ಕೊಡುತ್ತಾರೆ?: ಪ್ರಿಯಾಂಕ್ ಖರ್ಗೆ
‘ರಾಜ್ಯಪಾಲರು ಯಾವ ಆಧಾರದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಾರೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
‘ಯಾವುದೇ ದಾಖಲೆಗಳಿಲ್ಲದೆ ಸ್ಪಷ್ಟನೆ ಕೊಡಿ ಎಂದು ರಾಜ್ಯಪಾಲರು ಈ ಹಿಂದೆ ಕೇಳಿರುವ ಉದಾಹರಣೆಗಳು ಇಲ್ಲ. ಬಲವಾದ ದಾಖಲೆಗಳಿದ್ದಾಗ ಕ್ರಮ ತೆಗೆದುಕೊಂಡಿದ್ದಾರೆ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲು ಬಲವಾದ ಕಾರಣ ಇರಬೇಕಲ್ಲವೇ? ಈ ಪ್ರಕರಣದಲ್ಲಿ ಯಾವ ದಾಖಲೆಯಿದೆ ಹೇಳಿ’ ಎಂದರು.
‘ಮಹಾರಾಷ್ಟ್ರದಲ್ಲಿ ಬೆಳಿಗ್ಗೆ 5 ಗಂಟೆಗೆ ಪ್ರಮಾಣವಚನಕ್ಕೆ ರಾಜ್ಯಪಾಲರು ಅವಕಾಶ ಮಾಡಿಕೊಟಿದ್ದರು. ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ಕಡೆ ರಾಜ್ಯಪಾಲರಿಂದ ಸಾಂವಿಧಾನಿಕ ಸ್ಥಾನ ದುರ್ಬಳಕೆ ಆಗುತ್ತಿದೆ’ ಎಂದು ಟೀಕಿಸಿದರು.
ಸರ್ಕಾರದ ಮುಂದಿನ ನಡೆಯ ಕುತೂಹಲ
ರಾಜ್ಯಪಾಲರ ನೋಟಿಸ್‌ಗೆ ಸ್ಪಷ್ಟನೆ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪ ಮಾಡಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಪ್ರಕರಣ ಇದಾಗಿದ್ದು, ಅಧಿಕಾರ ದುರುಪಯೋಗದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೀಗಾಗಿ, ನೋಟಿಸ್ ವಾಪಸ್ ಪಡೆಯುವಂತೆ ರಾಜ್ಯಪಾಲರನ್ನು ಕೋರುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ನೀಡುವುದು ಅನಿವಾರ್ಯವಾದರೆ, ಅದರಲ್ಲಿ ಏನೆಲ್ಲ ವಿಷಯ ಪ್ರಸ್ತಾಪಿಸಬೇಕು; ಮುಖ್ಯಮಂತ್ರಿಯವರನ್ನು ಯಾವ ರೀತಿ ಸಮರ್ಥಿಸಿಕೊಳ್ಳಬೇಕು ಹಾಗೂ ಕಾನೂನಿನ ಆಯಾಮಗಳೇನು ಎಂಬ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ‘ವಿರೋಧ ಪಕ್ಷಗಳಾದ ಬಿಜೆಪಿ–ಜೆಡಿಎಸ್ ನಾಯಕರು ರಾಜಭವನವನ್ನು ಬಳಸಿ ಸರ್ಕಾರವನ್ನು ಉರುಳಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ಅನೇಕ ರಾಜ್ಯಗಳಲ್ಲಿ, ಬಿಜೆಪಿ ಇಂತಹ ಮಾರ್ಗ ಹಿಡಿದಿದೆ. ನೋಟಿಸ್ ವಾಪಸ್‌ಗೆ ಮನವಿ ಮಾಡುವ ಬದಲು, ಅವರ ನಡೆಗೆ ಸಡ್ಡು ಹೊಡೆದು, ಕಾನೂನು ಹೋರಾಟ ನಡೆಸುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.